Robin Uthappa: ರಾಬಿನ್ ಉತ್ತಪ್ಪ ಸಿಡಿಲಬ್ಬರದ ಬ್ಯಾಟಿಂಗ್: ಜೈಂಟ್ಸ್ ತಂಡಕ್ಕೆ ಜಯ
ILT20: 7 ಓವರ್ ವೇಳೆ ದುಬೈ ಕ್ಯಾಪಿಟಲ್ಸ್ ಮೊತ್ತ 70ರ ಗಡಿದಾಟಿತು. ಅಲ್ಲದೆ ನಾಯಕ ರೋವ್ಮನ್ ಪೊವೆಲ್ (38) ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು.
Updated on: Jan 17, 2023 | 3:56 PM

ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ದುಬೈ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಉತ್ತಪ್ಪ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದ್ದರು. ಇದಕ್ಕೂ ಈ ಪಂದ್ಯದಲ್ಲಿ ಟಾಸ್ ಗೆದ್ದ ಗಲ್ಫ್ ಜೈಂಟ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ದುಬೈ ಕ್ಯಾಪಿಟಲ್ಸ್ ಪರ ಆರಂಭಿಕರಾಗಿ ರಾಬಿನ್ ಉತ್ತಪ್ಪ ಹಾಗೂ ಜೋ ರೂಟ್ ಕಣಕ್ಕಿಳಿದಿದ್ದರು. ಕೇವಲ 6 ರನ್ಗಳಿಸಿ ರೂಟ್ ಔಟಾದರೆ, ಉತ್ತಪ್ಪ ಮಾತ್ರ ಅತ್ಯಾಕರ್ಷಕ ಇನಿಂಗ್ಸ್ ಆಡಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಕನ್ನಡಿಗ ಗಲ್ಫ್ ಜೈಂಟ್ಸ್ ಬೌಲರ್ಗಳ ಬೆಂಡೆತ್ತಿದರು.

ಪರಿಣಾಮ 7 ಓವರ್ ವೇಳೆ ದುಬೈ ಕ್ಯಾಪಿಟಲ್ಸ್ ಮೊತ್ತ 70ರ ಗಡಿದಾಟಿತು. ಅಲ್ಲದೆ ನಾಯಕ ರೋವ್ಮನ್ ಪೊವೆಲ್ (38) ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. ಇದರ ನಡುವೆ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್ ಬಾರಿಸಿದ ಉತ್ತಪ್ಪ 46 ಎಸೆತಗಳಲ್ಲಿ 79 ರನ್ ಚಚ್ಚಿದರು. ಈ ವೇಳೆ ಡೇವಿಡ್ ವೀಝ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾದರು.

ಇನ್ನು ಅಂತಿಮ ಹಂತದಲ್ಲಿ ಸಿಕಂದರ್ ರಾಜಾ 19 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಅಜೇಯ 30 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು.

183 ರನ್ಗಳ ಬೃಹತ್ ಗುರಿ ಪಡೆದ ಗಲ್ಫ್ ಜೈಂಟ್ಸ್ ತಂಡಕ್ಕೆ ಆರಂಭಿಕ ಆಟಗಾರ ಜೇಮ್ಸ್ ವಿನ್ಸ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ವಿನ್ಸ್ 56 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 83 ರನ್ ಬಾರಿಸಿದರು. ಮತ್ತೊಂದೆಡೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗೆರ್ಹಾರ್ಡ್ ಎರಾಸ್ಮಸ್ 28 ಎಸೆತಗಳಲ್ಲಿ 5 ಫೋರ್ ಹಾಗೂ 2 ಸಿಕ್ಸ್ನೊಂದಿಗೆ 52 ರನ್ಗಳ ಕಾಣಿಕೆ ನೀಡಿದರು.

ಪರಿಣಾಮ ಗಲ್ಫ್ ಜೈಂಟ್ಸ್ ತಂಡವು 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ಗಳ ಗುರಿಮುಟ್ಟಿತು. ಇತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಉತ್ತಪ್ಪ ಅವರ ಸ್ಪೋಟಕ ಅರ್ಧಶತಕ ವ್ಯರ್ಥವಾಯಿತು.
