- Kannada News Photo gallery Cricket photos IND vs ENG 2nd odi rohit shrama smashed 58th odi half century
IND vs ENG: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ದ್ರಾವಿಡ್, ಗೇಲ್ ದಾಖಲೆ ಉಡೀಸ್..!
Rohit Sharma: ಕಟಕ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಮತ್ತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ರೋಹಿತ್ ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ ಇದುವರೆಗೆ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ರೋಹಿತ್ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
Updated on:Feb 09, 2025 | 7:52 PM

ಕಟಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 304 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮುರಿಯದ ವಿಕೆಟ್ಗೆ ಶತಕದ ಜೊತೆಯಾಟವನ್ನಾಡಿದ್ದಾರೆ.

ಇದೇ ವೇಳೆ ನಾಯಕ ರೋಹಿತ್ ಶರ್ಮಾ ಕೇವಲ 30 ಎಸೆತಗಳಲ್ಲಿ ಏಕದಿನ ವೃತ್ತಿಜೀವನದ 58 ನೇ ಅರ್ಧಶತಕವನ್ನು ಕಲೆಹಾಕಿದ್ದಾರೆ. ರೋಹಿತ್ ತಮ್ಮ ಈ ಅಜೇಯ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಮೂಲಕ ರೋಹಿತ್ ಇಬ್ಬರು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.

ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ರೋಹಿತ್ ಶರ್ಮಾರನ್ನು ಇನ್ನಿಲ್ಲದಂತೆ ಟೀಕಿಸಲಾಗುತ್ತಿತ್ತು. ರೋಹಿತ್ ಆದಷ್ಟು ಬೇಗ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬೇಕು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದರೆ ತನ್ನಲ್ಲಿ ಇನ್ನು ಕ್ರಿಕೆಟ್ ಹಸಿವು ಇದೇ ಎಂಬುದನ್ನು ಇಂದಿನ ಆಟದಲ್ಲಿ ರೋಹಿತ್ ಸಾಭೀತುಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿರುವ ರೋಹಿತ್ ಶರ್ಮಾ ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ರೋಹಿತ್, ತಂಡದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಈ ವಿಚಾರದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಲು ರೋಹಿತ್ಗೆ 22 ರನ್‌ಗಳ ಅಗತ್ಯವಿತ್ತು. ಇದೀಗ ಈ ಪಂದ್ಯದ ಐದನೇ ಓವರ್‌ನಲ್ಲಿ ಸಾಕಿಬ್ ಮಹಮೂದ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್, ದ್ರಾವಿಡ್ ಅವರ ದಾಖಲೆಯನ್ನು ಮುರಿದರು. ಈ ಪಟ್ಟಿಯಲ್ಲಿ ರೋಹಿತ್ ಈಗ ನಾಲ್ಕನೇ ಸ್ಥಾನದಲ್ಲಿದ್ದು, ಅವರಿಗಿಂತ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಮಾತ್ರ ಮುಂದಿದ್ದಾರೆ.

ಇದಲ್ಲದೆ ಇಂಗ್ಲೆಂಡ್ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಹಿತ್ಗೆ ಇದು ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ರೋಹಿತ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ಈ ಮಾದರಿಯಲ್ಲಿ ಅವರ ಅತ್ಯಂತ ವೇಗದ ಅರ್ಧಶತಕವಾಗಿದೆ. ಹಾಗೆಯೇ ಕಳೆದ ವರ್ಷ ಅವರು ಶ್ರೀಲಂಕಾ ವಿರುದ್ಧ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರೆ, 2023 ರಲ್ಲಿ ಅಫ್ಘಾನಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದರು.

ಹಾಗೆಯೇ ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿರುವ ರೋಹಿತ್ ಏಕದಿನ ಮಾದರಿಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಗೇಲ್ ಈ ಮಾದರಿಯಲ್ಲಿ 331 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ ಈ ಪಂದ್ಯದಲ್ಲಿ 4 ಸಿಕ್ಸರ್‌ಗಳೊಂದಿಗೆ ಇದುವರೆಗೆ 335 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ.
Published On - 7:38 pm, Sun, 9 February 25



















