- Kannada News Photo gallery Cricket photos IND vs ENG Jasprit Bumrah first bowler in Tests to achieve this feat in england
IND vs ENG: ಮ್ಯಾಂಚೆಸ್ಟರ್‌ನಲ್ಲಿ ಬ್ಯಾಟ್ ಮುಟ್ಟದೆ ಅರ್ಧಶತಕ ಪೂರೈಸಲಿರುವ ಬುಮ್ರಾ
Jasprit Bumrah: ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುವ ಬಗ್ಗೆ ಅನಿಶ್ಚಿತತೆ ಇದೆ. ಆದರೆ, ಅವರು ಆಡಿದರೆ ಇಂಗ್ಲೆಂಡ್‌ನಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದು ಇತಿಹಾಸ ನಿರ್ಮಿಸುವ ಸಾಧ್ಯತೆ ಇದೆ. ಇದುವರೆಗೆ 49 ವಿಕೆಟ್‌ಗಳನ್ನು ಪಡೆದಿರುವ ಬುಮ್ರಾ, ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಬೌಲರ್ ಆಗಲಿದ್ದಾರೆ. ವಿಶ್ರಾಂತಿ ನೀಡುವ ಯೋಜನೆ ಇದ್ದರೂ, ಸರಣಿಯ ಪ್ರಾಮುಖ್ಯತೆಯಿಂದಾಗಿ ಬುಮ್ರಾ ಆಡುವ ಸಾಧ್ಯತೆ ಹೆಚ್ಚಿದೆ.
Updated on: Jul 19, 2025 | 9:45 PM

ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಮುಂದಿನ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಕೆಲಸದ ಹೊರೆ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಬುಮ್ರಾಗೆ ವಿಶ್ರಾಂತಿ ನೀಡಲು ಈ ಮೊದಲ ನಿಶ್ಚಯಿಸಲಾಗಿತ್ತು. ಆದರೆ ಸರಣಿಯ ಗಂಭೀರತೆಯನ್ನು ಅರಿತಿರುವ ಆಡಳಿತ ಮಂಡಳಿ ಬುಮ್ರಾರನ್ನು ಮ್ಯಾಂಚೆಸ್ಟರ್‌ನಲ್ಲಿ ಕಣಕ್ಕಿಳಿಸಲು ತೀರ್ಮಾನಿಸಿದೆ ಎಂಬ ವರದಿ ಇದೆ.

ಒಂದು ವೇಳೆ ಮ್ಯಾಂಚೆಸ್ಟರ್‌ನಲ್ಲಿ ಬುಮ್ರಾ ಕಣಕ್ಕಿಳಿದರೆ ಇತಿಹಾಸ ಸೃಷ್ಟಿಯಾಗುವ ಸಾಧ್ಯತೆಗಳಿವೆ. ವಾಸ್ತವವಾಗಿ, ಬುಮ್ರಾ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಒಂದು ವಿಕೆಟ್ ಪಡೆದರೆ, ಇಂಗ್ಲೆಂಡ್‌ನಲ್ಲಿ ತಮ್ಮ 50 ಟೆಸ್ಟ್ ವಿಕೆಟ್‌ಗಳನ್ನು ಪೂರ್ಣಗೊಳಿಸುತ್ತಾರೆ. ಇದರೊಂದಿಗೆ, ಬುಮ್ರಾ ಇಂಗ್ಲಿಷ್ ನೆಲದಲ್ಲಿ ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ಬೌಲರ್ ಆಗಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ಇದುವರೆಗೆ 10 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಒಟ್ಟು 49 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂಡಿಗೆ ಬುಮ್ರಾ ಈಗಾಗಲೇ ಮಾಜಿ ಶ್ರೇಷ್ಠ ವೇಗಿ ಕಪಿಲ್ ದೇವ್ (48 ವಿಕೆಟ್‌ಗಳು) ಅವರನ್ನು ಅತಿ ಹೆಚ್ಚು ವಿಕೆಟ್‌ಗಳ ವಿಷಯದಲ್ಲಿ ಹಿಂದಿಕ್ಕಿದ್ದಾರೆ. ಈಗ ಬುಮ್ರಾ ಮ್ಯಾಂಚೆಸ್ಟರ್ ಬದಲಿಗೆ ಓವಲ್‌ನಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಆಡಿದರೆ, ಅಲ್ಲಿಯೂ ಈ ದಾಖಲೆಯನ್ನು ಮಾಡಲು ಅವಕಾಶವಿರುತ್ತದೆ.

ಲೀಡ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ್ದ ಬುಮ್ರಾಗೆ ಎರಡನೇ ಪಂದ್ಯದಲ್ಲಿ ಕೆಲಸದ ಹೊರೆಯಿಂದಾಗಿ ವಿಶ್ರಾಂತಿ ನೀಡಲಾಗಿತ್ತು. ಆ ಬಳಿಕ ನಡೆದಿದ್ದ ಲಾರ್ಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ್ದ ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಬುಮ್ರಾ ಇಶಾಂತ್ ಶರ್ಮಾ ಅವರನ್ನು ಹಿಂದಿಕ್ಕಿದರು.

ಪ್ರಸ್ತುತ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಇಶಾಂತ್ ಶರ್ಮಾ ಹೆಸರಿನಲ್ಲಿತ್ತು. ಇಶಾಂತ್ 22 ಇನ್ನಿಂಗ್ಸ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದರೆ, ಇದೀಗ ಮೂರನೇ ಸ್ಥಾನಕ್ಕೆ ಜಾರಿರುವ ಕಪಿಲ್ ದೇವ್ ಆಡಿದ್ದ 22 ಇನ್ನಿಂಗ್ಸ್‌ಗಳಲ್ಲಿ 43 ವಿಕೆಟ್‌ಗಳನ್ನು ಪಡೆದಿದ್ದರು.

2018 ರಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ಬುಮ್ರಾ ಈಗ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಬುಮ್ರಾ ಈ ಸರಣಿಯಲ್ಲಿ ಇನ್ನೂ ಒಂದು ಟೆಸ್ಟ್ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಅವರು ಮುಂದಿನ ಪಂದ್ಯವನ್ನು ಆಡಿ ಅದರಲ್ಲಿ ಒಂದು ವಿಕೆಟ್ ಪಡೆದರೆ, ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
