Joe Root: ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ಕಣ್ಣಿಟ್ಟ ಜೋ ರೂಟ್
India vs England Test: ಭಾರತ vs ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಿಂದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಅತ್ತ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡ ವೈಯುಕ್ತಿಕ ಕಾರಣಗಳಿಂದಾಗಿ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ.
Updated on: Jan 24, 2024 | 3:07 PM

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ನಾಳೆಯಿಂದ (ಜ.25) ಶುರುವಾಗಲಿದೆ. ಹೈದರಾಬಾದ್ನ ರಾಜೀವ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ 10 ರನ್ ಬಾರಿಸಿದರೆ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಯಾಗಲಿದೆ. ಅದು ಕೂಡ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ಧ 32 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 7 ಶತಕಗಳೊಂದಿಗೆ 2535 ರನ್ ಕಲೆಹಾಕಿದ್ದಾರೆ.

ಇದೀಗ ಜೋ ರೂಟ್ ಈ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಭಾರತದ ವಿರುದ್ಧ 26 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 9 ಭರ್ಜರಿ ಶತಕಗಳೊಂದಿಗೆ 2526 ರನ್ ಬಾರಿಸಿದ್ದಾರೆ. ಇದೀಗ 27ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿರುವ ರೂಟ್ ಕೇವಲ 10 ರನ್ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬಹುದು.

ಹಾಗೆಯೇ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ ಭಾರತದಲ್ಲಿ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ನಲ್ಲಿ 1000 ರನ್ ಪೂರೈಸಿದ ಹಿರಿಮೆಗೂ ಜೋ ರೂಟ್ ಪಾತ್ರರಾಗಲಿದ್ದಾರೆ. ಇದುವರೆಗೆ ಭಾರತದಲ್ಲಿ 20 ಟೆಸ್ಟ್ ಪಂದ್ಯಗಳನ್ನಾಡಿರುವ ರೂಟ್ 2 ಶತಕಗಳೊಂದಿಗೆ ಒಟ್ಟು 952 ರನ್ ಕಲೆಹಾಕಿದ್ದಾರೆ.

ಭಾರತದ ಪಿಚ್ನಲ್ಲಿ 50.10 ಸರಾಸರಿಯಲ್ಲಿ ರನ್ ಕಲೆಹಾಕಿರುವ ಜೋ ರೂಟ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಟ್ರಂಪ್ ಕಾರ್ಡ್. ಇದರ ಜೊತೆಗೆ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಈ ಸರಣಿಯಲ್ಲಿ ಜೋ ರೂಟ್ಗಾಗಿ ಟೀಮ್ ಇಂಡಿಯಾ ವಿಶೇಷ ರಣತಂತ್ರಗಳನ್ನು ರೂಪಿಸಲಿದೆ. ಈ ರಣತಂತ್ರಗಳಿಗೆ ಜೋ ರೂಟ್ ಪ್ರತಿತಂತ್ರ ರೂಪಿಸಿ ಯಾವೆಲ್ಲಾ ದಾಖಲೆ ಬರೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
