- Kannada News Photo gallery Cricket photos IND vs ENG: N. Jagadeesan replaces Rishab Pant in India squad
ಟೀಮ್ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ಎಂಟ್ರಿ
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಜುಲೈ 31 ರಿಂದ ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಗಾಯಗೊಂಡಿರುವ ಪಂತ್ ಬದಲಿಗೆ ಇದೀಗ ತಮಿಳುನಾಡು ಮೂಲದ ವಿಕೆಟ್ ಕೀಪರ್ನನ್ನು ಆಯ್ಕೆ ಮಾಡಲಾಗಿದೆ.
Updated on: Jul 28, 2025 | 7:24 AM

ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ (Team India) ಮಹತ್ವದ ಬದಲಾವಣೆಯಾಗಿದೆ. ಈ ಬದಲಾವಣೆಯೊಂದಿಗೆ ರಿಷಭ್ ಪಂತ್ (Rishab Pant) ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಸಹ ಖಚಿತವಾಗಿದೆ.

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಬ್ಯಾಟಿಂಗ್ ವೇಳೆ ರಿಷಭ್ ಪಂತ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿತ್ತು. ಈ ಗಾಯದ ಕಾರಣ ಅವರು ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಅಲ್ಲದೆ ಗಾಯವು ಗಂಭೀರವಾಗಿರುವ ಕಾರಣ ಅವರಿಗೆ ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಐದನೇ ಟೆಸ್ಟ್ ಪಂದ್ಯದಿಂದ ಪಂತ್ ಹೊರಗುಳಿದಿದ್ದಾರೆ.

ಇತ್ತ ರಿಷಭ್ ಪಂತ್ ಹೊರಗುಳಿಯುವ ಸುದ್ದಿಯ ಬೆನ್ನಲ್ಲೇ ಟೀಮ್ ಇಂಡಿಯಾಗೆ ಬದಲಿ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ ಇಶಾನ್ ಕೂಡ ಗಾಯಗೊಂಡಿರುವ ಕಾರಣ ತಮಿಳುನಾಡು ಮೂಲಕ ಅನುಭವಿ ವಿಕೆಟ್ ಕೀಪರ್ ನಾರಾಯಣ್ ಜಗದೀಸನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಎನ್. ಜಗದೀಸನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈವರೆಗೆ 52 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 79 ಇನಿಂಗ್ಸ್ ಆಡಿರುವ ಅವರು 3373 ರನ್ ಕಲೆಹಾಕಿದ್ದಾರೆ. ಇದರ ನಡುವೆ ಒಂದು ತ್ರಿಶತಕ, 9 ಶತಕ ಹಾಗೂ 14 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಅನುಭವಿ ಆಟಕ್ಕೆ ಮಣೆಹಾಕಿರುವ ಬಿಸಿಸಿಐ ಕೊನೆಯ ಟೆಸ್ಟ್ ಪಂದ್ಯಕ್ಕೆ 29 ವರ್ಷದ ಜಗದೀಸನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅನ್ಶುಲ್ ಕಂಬೋಜ್, ಎನ್. ಜಗದೀಸನ್.




