ಪಾಕ್ ವಿರುದ್ಧದ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿದ ಟೀಮ್ ಇಂಡಿಯಾ
India vs Pakistan: ದುಬೈನಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಅದು ಸಹ ತನ್ನ ಬದ್ಧ ವೈರಿ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ. ಈ ಗೆಲುವಿನೊಂದಿಗೆ ಭಾರತ ತಂಡವು ಹಲವು ದಾಖಲೆಗಳನ್ನು ಸಹ ನಿರ್ಮಿಸಿದೆ. ಈ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
Updated on: Sep 22, 2025 | 12:53 PM

ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈ ನಾಗಾಲೋಟದ ಮುಂದೆ ಪಾಕಿಸ್ತಾನ್ ತಂಡ ಎರಡು ಬಾರಿ ಮುಗ್ಗರಿಸಿದೆ. ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ್ ಇದೀಗ ದ್ವಿತೀಯ ಪಂದ್ಯದಲ್ಲೂ 6 ವಿಕೆಟ್ಗಳಿಂದ ಪರಾಜಯಗೊಂಡಿದೆ.

ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಪಾಕ್ ವಿರುದ್ಧದ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿರುವುದು ವಿಶೇಷ.

ಅಂದರೆ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ವಿರುದ್ಧ 170+ ರನ್ ಚೇಸ್ ಮಾಡಿ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪಾಕ್ ವಿರುದ್ಧ ಚೇಸ್ ಮಾಡಿದ ಗರಿಷ್ಠ ಸ್ಕೋರ್ 160 ರನ್ಗಳು. 2022 ರಲ್ಲಿ 160 ರನ್ ಬೆನ್ನತ್ತಿ ಟೀಮ್ ಇಂಡಿಯಾ 4 ವಿಕೆಟ್ಗಳ ಜಯ ಸಾಧಿಸಿತ್ತು. ಇದೀಗ 172 ರನ್ಗಳ ಗುರಿ ಬೆನ್ನತ್ತುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ ವಿಕೆಟ್ಗೆ 105 ರನ್ಗಳ ಜೊತೆಯಾಟವಾಡಿದ್ದರು. ಇದರೊಂದಿಗೆ ಪಾಕ್ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಶತಕದ ಜೊತೆಯಾಟವಾಡಿದ ಭಾರತದ ಮೊದಲ ಆರಂಭಿಕ ಜೋಡಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2012 ರಲ್ಲಿ ಗೌತಮ್ ಗಂಭೀರ್ ಹಾಗೂ ಅಜಿಂಕ್ಯ ರಹಾನೆ 77 ರನ್ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ 105 ರನ್ಗಳ ಪಾಲುದಾರಿಕೆಯೊಂದಿಗೆ ಅಭಿ-ಗಿಲ್ ಜೋಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಪಾಕಿಸ್ತಾನ್ ವಿರುದ್ಧ ಪವರ್ಪ್ಲೇನಲ್ಲಿ 65 ಕ್ಕಿಂತ ಹೆಚ್ಚು ರನ್ ಕಲೆಹಾಕಿದೆ. ಇದಕ್ಕೂ ಮುನ್ನ 2022 ರಲ್ಲಿ 62 ರನ್ಗಳಿಸಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಮೊದಲ 6 ಓವರ್ಗಳಲ್ಲಿ 69 ರನ್ ಚಚ್ಚಿದ್ದಾರೆ. ಈ ಮೂಲಕ ಪಾಕ್ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಮೊದಲ 6 ಓವರ್ಗಳಲ್ಲಿ ಅತ್ಯಧಿಕ ರನ್ಗಳಿಸಿದ ಜೋಡಿ ಎನಿಸಿಕೊಂಡಿದ್ದಾರೆ.




