- Kannada News Photo gallery Cricket photos India vs Australia ODI: Adelaide Loss Blamed on Poor Fielding
IND vs AUS: 3 ಜೀವದಾನ ನೀಡಿ ಕೆಟ್ಟ ಗಿಲ್ ಪಡೆ..! ಟೀಂ ಇಂಡಿಯಾ ಸೋಲಿಗೆ ಇದುವೇ ಕಾರಣ
India vs Australia ODI: ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. 17 ವರ್ಷಗಳ ನಂತರ ಈ ಮೈದಾನದಲ್ಲಿ ಭಾರತ ಸೋಲು ಕಂಡಿದೆ. ಕಳಪೆ ಫೀಲ್ಡಿಂಗ್, ವಿಶೇಷವಾಗಿ ಮ್ಯಾಥ್ಯೂ ಶಾರ್ಟ್‌ಗೆ ಮೂರು ಜೀವದಾನ ನೀಡಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣ. ಅಕ್ಷರ್ ಪಟೇಲ್, ಸಿರಾಜ್ ಕೈಚೆಲ್ಲಿದ ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು, ಇದರಿಂದ ಭಾರತ ಸರಣಿಯನ್ನು ಕಳೆದುಕೊಂಡಿತು.
Updated on: Oct 23, 2025 | 7:39 PM

ಅಡಿಲೇಡ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿದೆ. ಈ ಮೂಲಕ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಇದು ಮಾತ್ರವಲ್ಲದೆ ಬರೋಬ್ಬರಿ 17 ವರ್ಷಗಳ ಬಳಿಕ ಅಡಿಲೇಡ್ ಮೈದಾನದಲ್ಲಿ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಗಿಲ್ ಪಡೆಯ ಸೋಲಿಗೆ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣ ಎನ್ನಬಹುದು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಮೂವರನ್ನು ಬಿಟ್ಟು ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಈ ಕಾರಣದಿಂದಾಗಿ ಕೇವಲ 264 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೂ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಆದರೆ ಟೀಂ ಇಂಡಿಯಾ ಫಿಲ್ಡಿಂಗ್ನಲ್ಲಿ ಮಾಡಿದ ಈ ಮೂರು ತಪ್ಪುಗಳು ತುಂಬಾ ದುಬಾರಿಯಾದವು.

ಮೊದಲಿಗೆ ಆಸ್ಟ್ರೇಲಿಯಾದ ಈ ಗೆಲುವಿನ ಕ್ರೆಡಿಟ್ ಮ್ಯಾಥ್ಯೂ ಶಾರ್ಟ್‌ಗೆ ಸಲ್ಲಬೇಕು. ಇದರ ಜೊತೆಗೆ ಅವರಿಗೆ ಮೂರು ಮೂರು ಜೀವದಾನ ನೀಡಿದ ಟೀಂ ಇಂಡಿಯಾ ಫಿಲ್ಡರ್ಗಳಿಗೂ ಸಲ್ಲಬೇಕು. ವಾಸ್ತವವಾಗಿ ಆಸೀಸ್ ಇನ್ನಿಂಗ್ಸ್ನ 16 ನೇ ಓವರ್‌ನಲ್ಲಿ, ನಿತೀಶ್ ರೆಡ್ಡಿ ಬೌಲಿಂಗ್‌ನಲ್ಲಿ ಪಾಯಿಂಟ್‌ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಶಾರ್ಟ್ ಅವರ ಸುಲಭ ಕ್ಯಾಚ್ ಅನ್ನು ಕೈಬಿಟ್ಟರು. ಆ ಸಮಯದಲ್ಲಿ ಶಾರ್ಟ್ 24 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಒಂದು ವೇಳೆ ಅಕ್ಷರ್ ಆ ಕ್ಯಾಚ್ ತೆಗೆದುಕೊಂಡಿದ್ದರೆ, ಪಂದ್ಯ ಭಾರತದತ್ತ ವಾಲುತ್ತಿತ್ತು.

ಮ್ಯಾಥ್ಯೂ ಶಾರ್ಟ್‌ಗೆ ಅಕ್ಷರ್ ಪಟೇಲ್ ಮಾತ್ರವಲ್ಲ, ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಜೀವದಾನ ನೀಡಿದರು. ಇನ್ನಿಂಗ್ಸ್ನ 29 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಶಾರ್ಟ್‌ಗೆ ಜೀವದಾನ ನೀಡಿದರು. ಸುಂದರ್ ಬೌಲಿಂಗ್‌ನಲ್ಲಿ ಶಾರ್ಟ್ ನೀಡಿದ ಸರಳ ಕ್ಯಾಚ್ ಅನ್ನು ಪಾಯಿಂಟ್‌ನಲ್ಲಿ ನಿಂತಿದ್ದ ಸಿರಾಜ್ ಕೈಚೆಲ್ಲಿದರು. ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಒಂದು ಹಂತದಲ್ಲಿ ಶಾರ್ಟ್ ಅವರನ್ನು ಔಟ್ ಮಾಡುವ ಅವಕಾಶವಿತ್ತು. ಮ್ಯಾಟ್ ರೆನ್‌ಶಾ ಮತ್ತು ಶಾರ್ಟ್ ನಡುವೆ ಸಂವಹನದ ಕೊರತೆಯಿಂದಾಗಿ ರನೌಟ್ ಮಾಡುವ ಅವಕಾಶವಿತ್ತು. ಆದರೆ ಕೆ.ಎಲ್. ರಾಹುಲ್ ಸ್ಟ್ರೈಕರ್‌ನ ತುದಿಯಲ್ಲಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ಇದರ ಪರಿಣಾಮವಾಗಿ ಶಾರ್ಟ್‌ಗೆ ಜೀವದಾನ ದೊರೆಯಿತು.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು ಮೂರು ಕ್ಯಾಚ್‌ಗಳು ಮತ್ತು ಒಂದು ರನ್-ಔಟ್ ಅನ್ನು ಕೈಬಿಟ್ಟಿತು, ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಎರಡು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ಫೀಲ್ಡಿಂಗ್ ಉತ್ತಮವಾಗಿರುತ್ತಿದ್ದರೆ, ಫಲಿತಾಂಶ ಭಾರತದ ಪರವಾಗಿ ಬರುತ್ತಿತ್ತು.




