- Kannada News Photo gallery Cricket photos India vs bangladesh 1st test day 1 report card in kannada r ashwin ravindra jadeja
IND vs BAN: ಭಾರತಕ್ಕೆ ಅಶ್ವಿನ್- ಜಡೇಜಾ ಆಸರೆ; ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 339/6
IND vs BAN: ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಬರೋಬ್ಬರಿ 195 ರನ್ಗಳ ಜೊತೆಯಾಟ ಹಂಚಿಕೊಂಡ ಅಶ್ವಿನ್ ಹಾಗೂ ಜಡೇಜಾ ಮೊದಲ ದಿನದಾಟದ ಹೀರೋಗಳೆನಿಸಿಕೊಂಡರು.
Updated on:Sep 19, 2024 | 5:41 PM

ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಬರೋಬ್ಬರಿ 195 ರನ್ಗಳ ಜೊತೆಯಾಟ ಹಂಚಿಕೊಂಡ ಅಶ್ವಿನ್ ಹಾಗೂ ಜಡೇಜಾ ಮೊದಲ ದಿನದಾಟದ ಹೀರೋಗಳೆನಿಸಿಕೊಂಡರು.

ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಯಿತು. ತಂಡದ ಮೊತ್ತ 14 ರನ್ಗಳಿರುವಾಗ ನಾಯಕ ರೋಹಿತ್ ಶರ್ಮಾ ಕೇವಲ 6 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಶುಭ್ಮನ್ ಗಿಲ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಈ ವೇಳೆ ಬರೋಬ್ಬರಿ 9 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಲ್ಲವನ್ನು ಹುಸಿ ಮಾಡಿದ ಕೊಹ್ಲಿ, ರೋಹಿತ್ರಂತೆ ಕೇವಲ 6 ರನ್ ಬಾರಿಸಿ ಔಟಾದರು. ಆದರೆ ಆ ಬಳಿಕ ಜೊತೆಯಾದ ಪಂತ್ ಹಾಗೂ ಜೈಸ್ವಾಲ್ ತಂಡದ ಇನ್ನಿಂಗ್ಸ್ ಕಟ್ಟಿದರು.

ಈ ಇಬ್ಬರು ಆಟಗಾರರು ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ರಿಷಬ್ ಪಂತ್ 39 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, 118 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 56 ರನ್ಗಳ ಅತ್ಯಮೂಲ್ಯ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್ ಪೆವಿಲಿಯನ್ ಸೇರಿಕೊಂಡರು.

ನಂತರ ಬಂದ ಕನ್ನಡಿಗ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಕ್ರೀಸ್ನಲ್ಲಿ ಸಾಕಷ್ಟು ಸಮಯ ಕಳೆದ ರಾಹುಲ್ 52 ಎಸೆತಗಳಲ್ಲಿ 12 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು. ಹೀಗಾಗಿ 144 ರನ್ಗಳಿಗೆ ಟೀಂ ಇಂಡಿಯಾ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಇಲ್ಲಿಂದ ಜೊತೆಯಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅಜೇಯ 195 ರನ್ಗಳ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ವೇಳೆ ಅಶ್ವಿನ್ 112 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಬೌಂಡರಿ ಸಹಿತ ಅಜೇಯ 102 ರನ್ ಕಲೆಹಾಕಿದರೆ, ಜಡೇಜಾ ಕೂಡ 117 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 86 ರನ್ ಬಾರಿಸಿದ್ದಾರೆ.

ಇನ್ನು ಬಾಂಗ್ಲಾದೇಶ ಪರ ಬೌಲಿಂಗ್ನಲ್ಲಿ ಮಿಂಚಿದ ಯುವ ವೇಗದ ಬೌಲರ್ ಹಸನ್ ಮಹಮೂದ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ರಿಷಬ್ ಸೇರಿದಂತೆ ನಾಲ್ವರ ವಿಕೆಟ್ ಉರುಳಿಸಿದರು. ಉಳಿದಂತೆ ನಹಿದ್ ರಾಣಾ, ಮೆಹದಿ ಹಸನ್ ಮೀರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
Published On - 5:12 pm, Thu, 19 September 24
