ಭಾರತ-ಪಾಕಿಸ್ತಾನ ಪಂದ್ಯವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದ್ದು, ಲೈವ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿಯೇ ಇದು ದಾಖಲೆಯ ವೀಕ್ಷಣೆಯಾಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಸ ಜಾಗತಿಕ ದಾಖಲೆಯಾಗಿದೆ.
ಈ ಮೂಲಕ ಕಳೆದ ಐಪಿಎಲ್ 2023 ರಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಮಾಡಿದ 3.2 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ.
ವಿಶ್ವಕಪ್ಗೂ ಮುನ್ನ ಕಳೆದ ತಿಂಗಳು ನಡೆದ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಡಿಸ್ನಿ ಹಾಟ್‌ಸ್ಟಾರ್ 2.8 ಕೋಟಿ ವೀಕ್ಷಕರ ದಾಖಲೆ ನಿರ್ಮಿಸಿತ್ತು.
ಇದಕ್ಕೂ ಮೊದಲು, ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಈ ಹಿಂದೆ 2.53 ಕೋಟಿ ವೀಕ್ಷಕರ ದಾಖಲೆಯನ್ನು ದಾಖಲಿಸಿತ್ತು. ವಾಸ್ತವವಾಗಿ 2019 ರ ವಿಶ್ವಕಪ್ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿ-ಫೈನಲ್ ಪಂದ್ಯವನ್ನು 2.53 ಕೋಟಿ ವೀಕ್ಷಕರು ವೀಕ್ಷಿಸಿದ್ದರು.
ಇನ್ನು ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಟಿವಿ ಪ್ರೇಕ್ಷಕರ ಅಂಕಿಅಂಶಗಳನ್ನು ದಾಖಲಿಸುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಈ ವಾರದ ಅಂತ್ಯದ ವೇಳೆಗೆ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ.
ಇದಲ್ಲದೆ ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ತನ್ನ ಆಯ್ದ ಚಿತ್ರಮಂದಿರಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಪ್ರದರ್ಶಿಸಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, PVR ಐನಾಕ್ಸ್‌ನ ಅನೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದವು ಎಂದು ತಿಳಿದುಬಂದಿದೆ.
ಹೆಚ್ಚಿನ ವೀಕ್ಷಕರನ್ನು ತನ್ನ ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸಲು, ಡಿಸ್ನಿ ಹಾಟ್‌ಸ್ಟಾರ್ ಭಾರತದಲ್ಲಿನ ಮೊಬೈಲ್ ಬಳಕೆದಾರರಿಗೆ ಏಷ್ಯಾಕಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳ ಉಚಿತ ಸ್ಟ್ರೀಮಿಂಗ್ ಅನ್ನು ನೀಡುವುದಾಗಿ ಜೂನ್‌ನಲ್ಲಿ ಘೋಷಿಸಿತ್ತು.
ಕಳೆದ ವರ್ಷ, ಡಿಸ್ನಿ ಸ್ಟಾರ್ ಎಲ್ಲಾ ಐಸಿಸಿ ಈವೆಂಟ್‌ಗಳ ಡಿಜಿಟಲ್ ಮತ್ತು ದೂರದರ್ಶನ ಹಕ್ಕುಗಳನ್ನು 2027 ರ ಅಂತ್ಯದವರೆಗೆ $3 ಬಿಲಿಯನ್‌ಗೆ ಖರೀದಿಸಿತ್ತು.
Published On - 1:12 pm, Sun, 15 October 23