Updated on: Oct 13, 2023 | 11:38 AM
ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಕದನಕ್ಕೆ ಆತಿಥ್ಯವಹಿಸುತ್ತಿರುವ ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆಗಿನ 10 ಕುತೂಹಲಕರ ಸಂಗತಿಗಳು ಹೀಗಿವೆ...
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ: ಅಹಮದಾಬಾದ್ನಲ್ಲಿ ನಿರ್ಮಾಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಂ 1.32 ಲಕ್ಷ ಆಸನಗಳ ಸಾಮರ್ಥ್ಯದ ಹೊಂದಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿಕೊಂಡಿದೆ. ಇದಕ್ಕೂ ಮೊದಲು 1,00,024 ಆಸನಗಳ ಸಾಮರ್ಥ್ಯವನ್ನು ಹೊಂದಿದ್ದ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಈ ದಾಖಲೆ ಹೊಂದಿತ್ತು.
ಅಪರೂಪದ ಸಾಧನೆಗೆ ಸಾಕ್ಷಿ: ಈ ಮೊದಲು ಗುಜರಾತ್‌ನ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ (ಮೊಟೆರಾ ಕ್ರೀಡಾಂಗಣ) ಎಂದು ಕರೆಯಲ್ಪಡುತ್ತಿದ್ದ ನರೇಂದ್ರ ಮೋದಿ ಕ್ರೀಡಾಂಗಣ ಹಲವು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಲ್ಲಿ 1986-87 ರಲ್ಲಿ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದರು. ಕಪಿಲ್ ದೇವ್ 1994 ರಲ್ಲಿ ತಮ್ಮ 432 ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಎಬಿ ಡಿವಿಲಿಯರ್ಸ್ 2008 ರಲ್ಲಿ ಟೆಸ್ಟ್ ದ್ವಿಶತಕವನ್ನು ಸಿಡಿಸಿದ್ದರು. 2011 ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೇ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ 30,000 ಅಂತರಾಷ್ಟ್ರೀಯ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
800 ಕೋಟಿ ರೂ ವೆಚ್ಚ: ಈ ಮೈದಾನದ ನವೀಕರಣವನ್ನು ಸ್ಟ್ಯಾಚ್ಯೂ ಆಫ್ ಯೂನಿಟಿಯ ನಿರ್ಮಾಣದಲ್ಲಿ ಕೆಲಸ ಮಾಡಿದ ಅದೇ ತಂಡ ಮಾಡಿತ್ತು. ಈ ನವೀಕರಣಕ್ಕೆ ತಗುಲಿದ ವೆಚ್ಚ ಸುಮಾರು 800 ಕೋಟಿ ರೂ. ಎಂದು ವರದಿಯಾಗಿತ್ತು.
ಬೃಹತ್ ಪಾರ್ಕಿಂಗ್ ಸ್ಥಳ: ಈ ಕ್ರೀಡಾಂಗಣ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದು, ಇಲ್ಲಿ ಏಕಕಾಲಕ್ಕೆ 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗನ್ನು ಪಾರ್ಕ್ ಮಾಡಬಹುದಾಗಿದೆ.
76 ಕಾರ್ಪೊರೇಟ್ ಪೆಟ್ಟಿಗೆಗಳು: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲು ಬರುವ ಗಣ್ಯರಿಗೆ ವಿಶೇಷವಾಗಿ 76 ಕಾರ್ಪೊರೇಟ್ ಬಾಕ್ಸ್‌ಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಬಾಕ್ಸ್ಗಳು ಹವಾನಿಯಂತ್ರಿತವಾಗಿದ್ದು, ಪ್ರತಿಯೊಂದರಲ್ಲೂ 25 ಜನರು ಕುಳಿತುಕೊಳ್ಳಬಹುದಾಗಿದೆ.
9 ಪಿಚ್‌ಗಳು: ನರೇಂದ್ರ ಮೋದಿ ಸ್ಟೇಡಿಯಂ 9 ಪಿಚ್‌ಗಳನ್ನು ಹೊಂದಿದೆ. ಅಲ್ಲದೆ ಎರಡು ಪ್ರತ್ಯೇಕ ಅಭ್ಯಾಸ ಮೈದಾನಗಳನ್ನು ನಿರ್ಮಿಸಲಾಗಿದೆ. ಆಟಗಾರರು ಒಟ್ಟಾಗಿ ಅಭ್ಯಾಸ ಮಾಡಲು ಸಾಕಷ್ಟು ನೆಟ್‌ಗಳನ್ನು ಹೊಂದಿದ್ದಾರೆ.
ಬಹುಪಯೋಗಿ ಕ್ರೀಡಾಂಗಣ: ಮೋದಿ ಕ್ರೀಡಾಂಗಣ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಲ್ಲದೆ, ಇದು ಪೂರ್ಣ ಪ್ರಮಾಣದ ಕ್ರಿಕೆಟ್ ಅಕಾಡೆಮಿ, ಹಲವಾರು ಒಳಾಂಗಣ ಪಿಚ್‌ಗಳು ಮತ್ತು ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್ ಮುಂತಾದ ಇತರ ಕ್ರೀಡೆಗಳಿಗೆ ಹಲವಾರು ಸೌಲಭ್ಯಗಳನ್ನು ಹೊಂದಿದೆ.
63 ಎಕರೆಯಲ್ಲಿ ಹರಡಿದೆ: ಬೃಹತ್ ಪಾರ್ಕಿಂಗ್ ಸ್ಥಳಗಳು, ಕ್ರಿಕೆಟ್ ಮೈದಾನ, ಸ್ಟ್ಯಾಂಡ್‌ಗಳು ಮತ್ತು ಅಭ್ಯಾಸ ಮೈದಾನಗಳು ಸೇರಿದಂತೆ, ಕ್ರೀಡಾಂಗಣದ ಪ್ರದೇಶವು ವಿಶಾಲವಾದ 63 ಎಕರೆಗಳಲ್ಲಿ ವ್ಯಾಪಿಸಿದೆ.
ಮೈದಾನದಲ್ಲಿ ಎಲ್ಇಡಿ ಬಲ್ಬ್: ನರೇಂದ್ರ ಮೋದಿ ಸ್ಟೇಡಿಯಂ, ಮೈದಾನದಲ್ಲಿ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದ ಭಾರತದ ಮೊದಲ ಕ್ರೀಡಾಂಗಣವಾಗಿದೆ.
ಪ್ರತಿ ಸ್ಟ್ಯಾಂಡ್‌ನಲ್ಲಿಯೂ ವಿಶೇಷ ಸೌಲಭ್ಯ: ನರೇಂದ್ರ ಮೋದಿ ಕ್ರೀಡಾಂಗಣದ ಪ್ರತಿಯೊಂದು ಸ್ಟ್ಯಾಂಡ್‌ನಲ್ಲಿಯೂ ಫುಡ್ ಕೋರ್ಟ್ ಹೊಂದಿದೆ. ಅಲ್ಲದೆ ಎರಡೂ ತಂಡಗಳ ಆಟಗಾರರಿಗೆ ಉತ್ತಮ ದರ್ಜೆಯ ಜಿಮಿಂಗ್ ಸೌಲಭ್ಯಗಳೊಂದಿಗೆ ಕ್ಲಬ್‌ಹೌಸ್ ಅನ್ನು ಸಹ ಒಳಗೊಂಡಿದೆ.