
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3-0 ಅಂತರದಿಂದ ಕಳೆದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇಲ್ಲದಿದ್ದರೆ, ಈ ಪಂದ್ಯದಲ್ಲೂ ಭಾರತ ಸೋಲುವ ಸಾಧ್ಯತೆಗಳಿತ್ತು. ಈ ಸರಣಿ ಸೋಲಿನೊಂದಿಗೆ ಭಾರತ ತಂಡ 7 ವರ್ಷಗಳ ಬಳಿಕ ಸತತ ಎರಡು ಟಿ20 ಸರಣಿಗಳನ್ನು ಸೋತ ಬೇಡದ ದಾಖಲೆಯನ್ನು ಬರೆದಿದೆ (PC-BCCI).

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಸೋಲುವುದಕ್ಕೂ ಮುನ್ನ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಕಳೆದುಕೊಂಡಿತ್ತು. ಈ ಸತತ ಎರಡು ಸರಣಿ ಸೋಲುಗಳೊಂದಿಗೆ ಟೀಂ ಇಂಡಿಯಾ 2019 ರ ಬಳಿಕ ಸತತ ಎರಡು ಟಿ20 ಸರಣಿಗಳನ್ನು ಸೋತ ಬೇಡದ ದಾಖಲೆಗೆ ಕೊರಳೊಡ್ಡಿದೆ (PC-BCCI).

2019 ರಲ್ಲಿ ಮೂರು ಪಂದ್ಯಗಳ ಟಿ20 ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಆ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು. ಆ ಬಳಿಕ ತನ್ನ ತವರು ನೆಲದಲ್ಲೇ ಅಂದರೆ ಭಾರತದಲ್ಲೇ ಆತಿಥೇಯ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ 2-0 ಅಂತರದಿಂದ ಮಣಿಸಿತ್ತು (PC-HT).

ಇದೀಗ 2026 ರಲ್ಲಿ 7 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಿದೆ. ಮೊಟ್ಟ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸೋಲುವುದರ ಜೊತೆಗೆ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಸೋತು ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಯಾವುದೇ ಮಾದರಿಯಲ್ಲಿ ಭಾರತದ ವಿರುದ್ಧ ಐರ್ಲೆಂಡ್ ಸರಣಿ ಗೆದ್ದಿದ್ದು ಇದೇ ಮೊದಲು. ಈ ಸೋಲಿನ ಆಘಾತದೊಂದಿಗೆ ಇಂಗ್ಲೆಂಡ್ಗೆ ಬಂದಿದ್ದ ಟೀಂ ಇಂಡಿಯಾ ಇಲ್ಲೂ ಅದೇ ಸೋಲಿನ ದವಡೆಗೆ ಸಿಲುಕಿದೆ (PC-BCCI).

ಇನ್ನು 4ನೇ ಟಿ20 ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 158 ರನ್ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 1 ವಿಕೆಟ್ ಕಳೆದುಕೊಂಡು 14ನೇ ಓವರ್ನಲ್ಲೇ ಗೆಲುವಿನ ದಡ ಮುಟ್ಟಿತು (PC-BCCI).