
ಭಾರತದ ಯುವ ವೇಗಿ ಗುರ್ನೂರ್ ಬ್ರಾರ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಗುರ್ನೂರ್ ಬ್ರಾರ್ ಯಾವುದೇ ಭಾರತೀಯ ಬೌಲರ್ ತಮ್ಮ ಏಕದಿನ ಚೊಚ್ಚಲ ಸರಣಿಯಲ್ಲಿ ಇದುವರೆಗೆ ಮಾಡಲು ಸಾಧ್ಯವಾಗದ ಗಮನಾರ್ಹ ದಾಖಲೆಯನ್ನು ನಿರ್ಮಿಸಿದ್ದಾರೆ (PC-PTI).

ಮೂರು ಪಂದ್ಯಗಳ ಚೊಚ್ಚಲ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶಿಷ್ಟ ದಾಖಲೆಯನ್ನು ಗುರ್ನೂರ್ ಬ್ರಾರ್ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದ ಬ್ರಾರ್, ಎರಡನೇ ಪಂದ್ಯದಲ್ಲಿ ಮತ್ತೆ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಇದೀಗ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲೂ ಗುರ್ನೂರ್ ಅವರ ಅದ್ಭುತ ಫಾರ್ಮ್ ಮುಂದುವರೆದಿದೆ (PC-PTI).

ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಬ್ರಾರ್, ಅಫ್ಘಾನಿಸ್ತಾನದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡಿದರು. ಇದು ಈ ಸರಣಿಯಲ್ಲಿ ಬ್ರಾರ್ ಪಡೆದ ಏಳನೇ ವಿಕೆಟ್ ಆಗಿತ್ತು. ಇದರೊಂದಿಗೆ, ಅವರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ (PC-PTI).

ಗುರ್ನೂರ್ ಬ್ರಾರ್‌ಗಿಂತ ಮೊದಲು, ಯುಜ್ವೇಂದ್ರ ಚಾಹಲ್ ಮತ್ತು ಪ್ರಸಿದ್ಧ್ ಕೃಷ್ಣ ಮೂರು ಪಂದ್ಯಗಳ ಚೊಚ್ಚಲ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಜಂಟಿ ದಾಖಲೆಯನ್ನು ಹೊಂದಿದ್ದರು. ಯುಜ್ವೇಂದ್ರ ಚಾಹಲ್ 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಚೊಚ್ಚಲ ಏಕದಿನ ಸರಣಿಯಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರೆ, ಪ್ರಸಿದ್ಧ್ ಕೃಷ್ಣ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಏಕದಿನ ಸರಣಿಯಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿದ್ದರು (PC-PTI).

ಇದೀಗ 25 ವರ್ಷದ ಗುರ್ನೂರ್ ಬ್ರಾರ್ ತಮ್ಮ ಚೊಚ್ಚಲ ಏಕದಿನ ಸರಣಿಯಲ್ಲಿ 7 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ಪರ ಆಡುವ ಎಡಗೈ ವೇಗದ ಬೌಲರ್ ಬ್ರಾರ್, ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಅವರಿಗೆ ಭಾರತ ಎ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಈಗ, ಅಂತರರಾಷ್ಟ್ರೀಯ ವೇದಿಕೆಯಲ್ಲೂ ಬ್ರಾರ್ ಗಮರ್ನಾಹ ಪ್ರದರ್ಶನ ನೀಡಿದ್ದಾರೆ (PC-PTI).