ಭಾರತೀಯ ಬ್ಯಾಟರ್ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ
India vs New Zealand 2nd T20: ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 20 ಓವರ್ಗಳಲ್ಲಿ 208 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 15.2 ಓವರ್ಗಳಲ್ಲಿ ಚೇಸ್ ಮಾಡಿ ಹೊಸ ವಿಶ್ವ ದಾಖಲೆ ಬರೆದಿದೆ.
Updated on: Jan 24, 2026 | 7:32 AM

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಟೀಮ್ ಇಂಡಿಯಾ (Team India). ಅದು ಕೂಡ ಪಾಕಿಸ್ತಾನ್ (Pakistan) ತಂಡದ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ.

ರಾಯ್ಪುರ್ನಲ್ಲಿ ನಡೆದ ಭಾರತದ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 208 ರನ್ಗಳನ್ನು. ಈ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 32 ಎಸೆತಗಳಲ್ಲಿ 11 ಫೋರ್ ಹಾಗೂ 4 ಸಿಕ್ಸರ್ಗಳೊಂದಿಗೆ 76 ರನ್ ಚಚ್ಚಿದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 82 ರನ್ ಬಾರಿಸಿದರು.

ಈ ಸ್ಫೋಟಕ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 15.2 ಓವರ್ಗಳಲ್ಲಿ 209 ರನ್ಗಳಿಸಿ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಹೊಸ ವಿಶ್ವ ದಾಖಲೆಯನ್ನು ಬರೆಯಿತು. ಅದು ಸಹ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಎಸೆತಗಳನ್ನು ಬಾಕಿಯಿರಿಸಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಹೆಸರಿನಲ್ಲಿತ್ತು. 2025 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಪಾಕ್ ತಂಡ 24 ಎಸೆತಗಳನ್ನು ಬಾಕಿಯಿಸಿ 205 ರನ್ಗಳನ್ನು ಚೇಸ್ ಮಾಡಿ ವಿಶ್ವ ದಾಖಲೆ ಬರೆದಿದ್ದರು.

ಇದೀಗ ಪಾಕಿಸ್ತಾನ್ ತಂಡದ ಈ ವಿಶ್ವ ದಾಖಲೆಯನ್ನು ಭಾರತೀಯ ಬ್ಯಾಟರ್ಗಳು ಧೂಳೀಪಟ ಮಾಡಿದ್ದಾರೆ. ನ್ಯೂಝಿಲೆಂಡ್ ನೀಡಿದ 209 ರನ್ಗಳ ಗುರಿಯನ್ನು 28 ಎಸೆತಗಳನ್ನು ಬಾಕಿಯಿರಿಸಿ ಚೇಸ್ ಮಾಡಿ ಗೆದ್ದಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಎಸೆತಗಳನ್ನು ಬಾಕಿಯಿರಿಸಿ 200+ ಸ್ಕೋರ್ ಬೆನ್ನತ್ತಿದ ಗೆದ್ದ ತಂಡ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
