
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿ ಹಳೆಯ ಫ್ರಾಂಚೈಸಿಗಳ ಎರಡು ಹೊಸ ಫ್ರಾಂಚೈಸಿ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಹಳೆಯ 8 ತಂಡಗಳಿಗೆ ರಿಟೈನ್ ಅವಕಾಶ ನೀಡಿರುವ ಕಾರಣ, ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಬಿಸಿಸಿಐ ಸ್ಪೇಷಲ್ ಪಿಕ್ ಆಯ್ಕೆ ನೀಡಿದೆ.

ಅಂದರೆ 8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಇರಲಿದೆ. ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ.

ಈ ಬಾರಿಯ ಮೆಗಾ ಹರಾಜು ಮೊತ್ತವನ್ನು 90 ಕೋಟಿ ಎಂದು ನಿಗದಿಪಡಿಸಲಾಗಿದೆ. ಅದರಂತೆ ಹೊಸ ಫ್ರಾಂಚೈಸಿಗಳು 33 ಕೋಟಿಯೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬಹುದು. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿಸಬೇಕಾಗುತ್ತದೆ. ಈ ಮೊತ್ತ ನೀಡಿ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು.

ಅದರಂತೆ ಮೆಗಾ ಹರಾಜು ಪಟ್ಟಿಯಲ್ಲಿರುವ 5 ಸ್ಟಾರ್ ವಿದೇಶಿ ಆಟಗಾರರಲ್ಲಿ ಇಬ್ಬರು ಹರಾಜಿಗೂ ಮುನ್ನ ಹೊಸ ತಂಡಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈಗಾಗಲೇ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಈ ಆಟಗಾರರನ್ನು ಸೆಳೆಯಲು ಹೊಸ ಫ್ರಾಂಚೈಸಿಗಳು ಇನ್ನಿಲ್ಲದ ಪ್ರಯತ್ನ ಮಾಡಲಿದೆ. ಹಾಗಿದ್ರೆ ಮೆಗಾ ಹರಾಜು ಪಟ್ಟಿಯಲ್ಲಿರುವ 5 ಸ್ಟಾರ್ ಆಟಗಾರರು ಯಾರೆಂದು ನೋಡೋಣ...

ಡೇವಿಡ್ ವಾರ್ನರ್: ಎಸ್ಆರ್ಹೆಚ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅವರ ಖರೀದಿಗಾಗಿ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಏಕೆಂದರೆ ಎರಡೂ ತಂಡಗಳಿಗೆ ನಾಯಕ ಹಾಗೂ ಆರಂಭಿಕನ ಅವಶ್ಯಕತೆಯಿದೆ. ಇತ್ತ ಆಸ್ಟ್ರೇಲಿಯಾದ ತಂಡ ಆಟಗಾರ ವಾರ್ನರ್ ಖರೀದಿಯಿಂದ ಈ ಎರಡೂ ಆಯ್ಕೆಯನ್ನು ಪಡೆಯಬಹುದು.

ಬೆನ್ ಸ್ಟೋಕ್ಸ್: ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿದೆ. ಇದಾಗ್ಯೂ ಅಂತಾರಾಷ್ಟ್ರೀಯ ಕ್ರಿಕೆಟ್ನ ಬೆಸ್ಟ್ ಆಲ್ರೌಂಡರ್ಗಳಲ್ಲಿ ಸ್ಟೋಕ್ಸ್ ಕೂಡ ಒಬ್ಬರು. ಹೀಗಾಗಿ ಹೊಸ ಫ್ರಾಂಚೈಸಿಗಳ ಆಯ್ಕೆಯ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಹೆಸರು ಕೂಡ ಮುಂಚೂಣಿಯಲ್ಲಿದೆ.

ಕಗಿಸೊ ರಬಾಡ: ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಐಪಿಎಲ್ನ ಅತ್ಯಂತ ಯಶಸ್ವಿ ಬೌಲರುಗಳಲ್ಲಿ ಒಬ್ಬರು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಬಾಡ ಅವರನ್ನು ರಿಲೀಸ್ ಮಾಡಿದೆ. ಹೊಸ ಫ್ರಾಂಚೈಸಿಗಳು ಇಬ್ಬರು ಬ್ಯಾಟರ್ಗಳನ್ನು ಆಯ್ಕೆ ಮಾಡಿ, ಮತ್ತೋರ್ವ ವೇಗಿಯ ಆಯ್ಕೆಗೆ ಮುಂದಾದರೆ ಕಗಿಸೊ ರಬಾಡ ಹೊಸ ತಂಡದ ಪಾಲಾಗಬಹುದು.

ಫಾಫ್ ಡುಪ್ಲೆಸಿಸ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಸಿಎಸ್ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡುಪ್ಲೆಸಿಸ್ ಅವರ ಖರೀದಿಗಾಗಿ ಈ ಬಾರಿ ಭರ್ಜರಿ ಪೈಪೋಟಿ ಕಂಡು ಬರಲಿದೆ. ಅದಕ್ಕೂ ಮುನ್ನ ಹೊಸ ಫ್ರಾಂಚೈಸಿಗಳು ಡುಪ್ಲೆಸಿಸ್ ಅವರನ್ನು ಆಯ್ಕೆ ಮಾಡಿದರೂ ಅಚ್ಚರಿಪಡಬೇಕಿಲ್ಲ.

ರಶೀದ್ ಖಾನ್: ಐಪಿಎಲ್ನ ಸ್ಪಿನ್ ಮಾಂತ್ರಿಕ ಎಂದೇ ಗುರುತಿಸಿಕೊಂಡಿರುವ ಅಫ್ಘಾನಿಸ್ತಾನ್ ತಂಡದ ರಶೀದ್ ಖಾನ್ ಕೂಡ ಈ ಬಾರಿ ಮೆಗಾ ಹರಾಜಿನಲ್ಲಿರುವುದು ವಿಶೇಷ. ಎಸ್ಆರ್ಹೆಚ್ ತಂಡದಿಂದ ಹೊರಬಂದಿರುವ ರಶೀದ್ ಖಾನ್ ಅವರ ಆಯ್ಕೆಗೆ ಹೊಸ ಫ್ರಾಂಚೈಸಿಗಳ ನಡುವೆಯೇ ಪೈಪೋಟಿ ಕಂಡು ಬರಲಿದೆ. ಹೀಗಾಗಿ ಹೊಸ ಎರಡು ತಂಡಗಳಲ್ಲಿ ಯಾವುದಾದರು ಒಂದು ಟೀಮ್ ರಶೀದ್ ಖಾನ್ ಅವರನ್ನು ಆಯ್ಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.