Updated on:Mar 02, 2022 | 6:44 PM
ಐಪಿಎಲ್ ಸೀಸನ್ 15 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ತಂಡದಿಂದ ಹೊರಬೀಳುವ ಆಘಾತ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ದೀಪಕ್ ಚಹರ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುತ್ತಿದ್ದ ವೇಳೆ ಸ್ನಾಯು ಸೆಳೆತಕ್ಕೊಳಗಾದ ಚಹರ್ ಆ ಬಳಿಕ ಮೈದಾನ ತೊರೆದಿದ್ದರು. ಅಷ್ಟೇ ಅಲ್ಲದೆ ಗಾಯದ ಕಾರಣ ಶ್ರೀಲಂಕಾ ವಿರುದ್ದದ ಸರಣಿಯಿಂದ ಕೂಡ ಹೊರಗುಳಿದಿದ್ದರು.
ಇದೀಗ ದೀಪಕ್ ಚಹರ್ ಕ್ವಾಡ್ರೈಸ್ಪ್ಸ್ ಸ್ನಾಯು (ಎಲುಬಿನ ಮುಂಭಾಗದ 4 ಸ್ನಾಯುಗಳ ಗುಂಪು) ಸೆಳೆತಕ್ಕೆ ಒಳಗಾಗಿರುವುದು ಖಚಿತವಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆ ಕಾಣಿಸಿಕೊಂಡರೆ ಚೇತರಿಸಿಕೊಳ್ಳಲು ಕೆಲ ವಾರಗಳೇ ತೆಗೆದುಕೊಳ್ಳುತ್ತವೆ. ಹೀಗಾಗಿ ಹೆಚ್ಚಿನ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅತ್ತ ಮಾರ್ಚ್ 26 ರಿಂದ ಐಪಿಎಲ್ ಶುರುವಾಗಲಿದೆ. ಇದರೊಳಗೆ ದೀಪಕ್ ಚಹರ್ ಚೇತರಿಸಿಕೊಂಡರೆ ಮಾತ್ರ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದರೆ ಕ್ರಿಕ್ಇನ್ಫೋ ಮಾಹಿತಿ ಪ್ರಕಾರ ಐಪಿಎಲ್ ಆರಂಭದ ವೇಳೆಗೆ ದೀಪಕ್ ಚಹರ್ ಗುಣಮುಖರಾಗುವುದು ಕೂಡ ಅನುಮಾನ. ಹೀಗಾಗಿ ಸಿಎಸ್ಕೆ ತಂಡದ ಆರಂಭಿಕ ಪಂದ್ಯಗಳಿಂದ ಚಹರ್ ಹೊರಗುಳಿಯುವುದು ಖಚಿತವಾಗಿದೆ. ಅಷ್ಟೇ ಅಲ್ಲದೆ ಗಾಯದ ಗಂಭೀರತೆಯ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದ್ದು, ಒಂದು ವೇಳೆ ಗಾಯ ಗಂಭೀರವಾಗಿದ್ದರೆ ಇಡೀ ಐಪಿಎಲ್ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂ. ನೀಡಿ ಮತ್ತೆ ಖರೀದಿಸಿತ್ತು. ಆಲ್ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಚಹರ್ ಈ ಬಾರಿಯ ಮೆಗಾ ಹರಾಜಿನ 2ನೇ ದುಬಾರಿ ಆಟಗಾರರಾಗಿದ್ದರು. ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡಿರುವುದು ಸಿಎಸ್ಕೆ ತಂಡದ ಚಿಂತೆಯನ್ನು ಹೆಚ್ಚಿಸಿದೆ.
Published On - 5:51 pm, Wed, 2 March 22