ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿ ಹಳೆಯ ಫ್ರಾಂಚೈಸಿಗಳ ಜೊತೆ ಎರಡು ಹೊಸ ಫ್ರಾಂಚೈಸಿ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಹಳೆಯ 8 ತಂಡಗಳಿಗೆ ರಿಟೈನ್ ಅವಕಾಶ ನೀಡಿರುವ ಕಾರಣ ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಬಿಸಿಸಿಐ ಸ್ಪೇಷಲ್ ಪಿಕ್ ಆಯ್ಕೆಯನ್ನು ನೀಡಿದೆ.
ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ಸಂಪರ್ಕಿಸಿ, ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು. ಹೀಗೆ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಆಯ್ಕೆ ಮಾಡಬಹುದು. ಹೀಗೆ ಆಯ್ಕೆ ಮಾಡಲಾದ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ನೀಡಬೇಕಾಗುತ್ತದೆ. ಅದರಂತೆ ಒಟ್ಟು 33 ಕೋಟಿಯೊಳಗೆ ಆಟಗಾರರನ್ನು ಆಯ್ಕೆ ಮಾಡಬಹುದು.
ಈ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಈಗಾಗಲೇ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದೆ. ಇದಾಗ್ಯೂ ಇನ್ನಿಬ್ಬರು ಆಟಗಾರರು ಯಾರು ಎಂಬುದು ಎಲ್ಲೂ ಕೂಡ ಬಹಿರಂಗವಾಗಿರಲಿಲ್ಲ. ಇದಾಗ್ಯೂ ಇಶಾನ್ ಕಿಶನ್, ರಶೀದ್ ಖಾನ್, ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್ ಹೆಸರುಗಳು ಲಕ್ನೋ ಫ್ರಾಂಚೈಸಿ ಜೊತೆ ತಳುಕು ಹಾಕಿಕೊಂಡಿತ್ತು.
ಆದರೀಗ ಲಕ್ನೋ ಈ ಎಲ್ಲಾ ಆಟಗಾರರನ್ನು ಕೈ ಬಿಟ್ಟು ಇಬ್ಬರು ಹೊಸ ಆಟಗಾರರ ಆಯ್ಕೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಅದರಂತೆ ಲಕ್ನೋ ಫ್ರಾಂಚೈಸಿಯು ಭಾರತೀಯ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿದೆ. ಅಲ್ಲದೆ ವಿದೇಶಿ ಆಟಗಾರನ ಕೋಟಾದಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಅವರನ್ನು ಆರಿಸಿಕೊಂಡಿದೆ ಎಂದು ವರದಿಯಾಗಿದೆ.
ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ರವಿ ಬಿಷ್ಣೋಯ್ ಅನ್ಕ್ಯಾಪ್ಡ್ ಆಟಗಾರ. ಹೀಗಾಗಿ ಅವರ ಆಯ್ಕೆಯಿಂದಾಗಿ ಲಕ್ನೋ ಫ್ರಾಂಚೈಸಿ ಮತ್ತಷ್ಟು ಹರಾಜು ಮೊತ್ತವನ್ನು ಉಳಿಸಿಕೊಳ್ಳಬಹುದು. ಹೀಗಾಗಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ. ಇನ್ನು ಸ್ಟೋಯಿನಿಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಆಲ್ರೌಂಡರ್ ಆಗಿ ಲಕ್ನೋ ಸ್ಟೋಯಿನಿಸ್ ಅವರನ್ನು ತಂಡಕ್ಕೆ ಸೇರಿಸಲು ಬಯಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನೊಂದೆಡೆ ಅಹಮದಾಬಾದ್ ಫ್ರಾಂಚೈಸಿ ಮೊದಲ ಆಯ್ಕೆಯಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಅಹಮದಾಬಾದ್ ತಂಡವನ್ನು ಪಾಂಡ್ಯ ಮುನ್ನಡೆಸಲಿದ್ದಾರೆ. ಇನ್ನು ಅಹಮದಾಬಾದ್ ತಂಡದ ರಾಡಾರ್ನಲ್ಲಿ ರಶೀದ್ ಖಾನ್ ಹಾಗೂ ಇಶಾನ್ ಕಿಶನ್ ಹೆಸರುಗಳಿದ್ದು, ಈ ಇಬ್ಬರು ಆಟಗಾರರೊಂದಿಗೆ ಹೊಸ ಫ್ರಾಂಚೈಸಿ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಹೊಸ ಎರಡು ತಂಡಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಲು ಜನವರಿ 22ರವರೆಗೆ ಬಿಸಿಸಿಐ ಗಡುವು ನೀಡಿದ್ದು, ಅದರೊಳಗೆ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ 6 ಆಟಗಾರರನ್ನು ಆಯ್ಕೆ ಮಾಡಬೇಕಿದೆ.
Published On - 10:09 pm, Thu, 13 January 22