Updated on:Apr 24, 2024 | 9:48 PM
IPL 2023 Final CSK vs GT: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ನಲ್ಲಿ ಅಬ್ಬರಿಸುವ ಮೂಲಕ ಸಾಯಿ ಸುದರ್ಶನ್ ಸಂಚಲನ ಸೃಷ್ಟಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಸಿಎಸ್ಕೆ ಬೌಲರ್ಗಳ ಬೆಂಡೆತ್ತಿದ ಸಾಯಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
8ನೇ ಓವರ್ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಆರಂಭದ 12 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಆದರೆ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಸಾಯಿ ಕೂಡ ಬ್ಯಾಟಿಂಗ್ ಗೇರ್ ಬದಲಿಸಿದರು.
ಸಾಯಿಯ ಅಬ್ಬರ ಶುರುವಾಗುತ್ತಿದ್ದಂತೆ ಅತ್ತ ಸಿಎಸ್ಕೆ ಬೌಲರ್ಗಳು ಲಯ ತಪ್ಪಿದರು. ಆ ಬಳಿಕ ಸುದರ್ಶನ್ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಇದರ ನಡುವೆ ಧೋನಿ ಹಲವು ಬಾರಿ ಬೌಲಿಂಗ್ನಲ್ಲಿ ಬದಲಾವಣೆ ತಂದರೂ ಸಾಯಿಯ ಅಬ್ಬರವನ್ನು ತಡೆಯಲಾಗಲಿಲ್ಲ.
ಪರಿಣಾಮ 33 ಎಸೆತಗಳಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದರು. ಈ ವೇಳೆ ಕ್ರೀಸ್ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಯುವ ಆಟಗಾರನಿಗೆ ಮನಸೊ ಇಚ್ಛೆ ಬ್ಯಾಟ್ ಬೀಸುವಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.
ಅಲ್ಲಿಂದ ಶುರುವಾದ ಸಾಯಿ ಸುದರ್ಶನ್ ಅಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ ಬೌಲರ್ಗಳು ಪರದಾಡಿದರು. ಅದರಲ್ಲೂ 19ನೇ ಓವರ್ವರೆಗೂ ಸಿಡಿಲಬ್ಬರ ಮುಂದುವರೆಸಿದ ಸಾಯಿ ಇನ್ನೇನು ಶತಕ ಪೂರೈಸಲಿದ್ದಾರೆ ಅನ್ನುವಷ್ಟರಲ್ಲಿ ಮತೀಶ ಪತಿರಾಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
ಆದರೆ ಅದಾಗಲೇ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಸಾಯಿ ಸುದರ್ಶನ್ 96 ರನ್ ಚಚ್ಚಿದ್ದರು. ಪರಿಣಾಮ GT ತಂಡವು ನಿಗದಿತ 20 ಓವರ್ಗಳಲ್ಲಿ 214 ರನ್ಗಳಿಸಲು ಸಾಧ್ಯವಾಯಿತು.
ವಿಶೇಷ ಎಂದರೆ ಇದೇ ಸಾಯಿ ಸುದರ್ಶನ್ ಅವರನ್ನು ಅತ್ಯುತ್ತಮ ಕ್ರಿಕೆಟಿಗನಾಗಿ ರೂಪಿಸಿದ ಕೀರ್ತಿ ಚೆನ್ನೈ ಸೂಪರ್ ಕಿಂಗ್ಸ್ಗೆ ಸಲ್ಲುತ್ತದೆ. ಏಕೆಂದರೆ ತಮಿಳುನಾಡು ಮೂಲದ ಸಾಯಿ ಸುದರ್ಶನ್ 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಡೆಸುವ ಜೂನಿಯರ್ ಸೂಪರ್ ಕಿಂಗ್ಸ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು.
ಅಂದು ಲೈಕಾ ಕೋವೈ ಕಿಂಗ್ಸ್ ಪರ ಕಣಕ್ಕಿಳಿದ ಸಾಯಿ ಸುದರ್ಶನ್ ಆ ಬಳಿಕ ಭಾರತ-ಎ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಇದಾದ ಬಳಿಕ ಸಾಯಿ ಸುದರ್ಶನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಐಪಿಎಲ್ನಲ್ಲಿ ಖರೀದಿಸಲಿಲ್ಲ ಎಂಬುದೇ ಅಚ್ಚರಿ.
ಆದರೆ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಚೆನ್ನೈನ ಆಟಗಾರನನ್ನು ಕೇವಲ 20 ಲಕ್ಷ ರೂ. ನೀಡಿ ಖರೀದಿಸಿತು. ಇದೀಗ 21 ವರ್ಷದ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೇ ಅಬ್ಬರಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.
Published On - 11:10 pm, Mon, 29 May 23