ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ 5 ಸೋಲಿನ ಬಳಿಕ 128 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.
ಆದರೆ ಈ ಗೆಲುವು ಕೂಡ ಡೆಲ್ಲಿ ತಂಡಕ್ಕೆ ಸುಲಭವಾಗಿ ದಕ್ಕಲಿಲ್ಲ. ಕೆಕೆಆರ್ ನೀಡಿದ ಅಲ್ಪ ಗುರಿ ಬೆನ್ನತ್ತಿದ್ದ ಡೆಲ್ಲಿ ಪವರ್ ಪ್ಲೇನಲ್ಲೇ 60 ರನ್ ಗಡಿ ದಾಟಿದರೂ ಉಳಿದ ರನ್ ಬಾರಿಸಲು ಕೊನೆಯ ಓವರ್ವರೆಗೂ ಹೋರಾಟ ನಡೆಸಬೇಕಾಯಿತು.
ತಂಡದ ಪರ ಮೊದಲ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಮಾಡುತ್ತಿರುವುದನ್ನು ಬಿಟ್ಟರೆ, ಉಳಿದವರ್ಯಾರು ಗೆಲುವಿಗಾಗಿ ಹೋರಾಟ ನಡೆಸುತ್ತಿಲ್ಲ. ಅದರಲ್ಲೂ ತಂಡದ ನಂಬಿಕಸ್ಥ ಬ್ಯಾಟರ್ ಮಿಚೆಲ್ ಮಾರ್ಷ್ ಅವರ ಕಳಪೆ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.
ಡೆಲ್ಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮಾರ್ಷ್ ಕೋಲ್ಕತ್ತಾ ವಿರುದ್ಧವೂ ವಿಫಲರಾದರು. ಕೇವಲ 2 ರನ್ ಗಳಿಸಲಷ್ಟೇ ಶಕ್ತರಾರು. ಈ ಮೂಲಕ ಸತತ ನಾಲ್ಕನೇ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರೆಯಿತು. ಮಾರ್ಷ್ ಈ ಸೀಸನ್ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಈ 4 ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 6 ರನ್‌ಗಳು ಹೊರಬಿದ್ದಿವೆ.
2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾರ್ಷ್ ಅವರನ್ನು ಐಪಿಎಲ್ 2022 ರ ಮೊದಲು ನಡೆದ ಮೆಗಾ ಹರಾಜಿನಲ್ಲಿ ದೆಹಲಿ 6.50 ಕೋಟಿಗೆ ಖರೀದಿಸಿತು. ಕಳೆದ ಸೀಸನ್ ಅವರಿಗೆ ಚೆನ್ನಾಗಿತ್ತು, ಆದರೆ ಈ ಬಾರಿ ಅವರ ಸ್ಥಿತಿ ತುಂಬಾ ಕೆಟ್ಟದಾಗಿದೆ.
ಹರಾಜಿನಲ್ಲಿ 6 ಕೋಟಿಗೂ ಅಧಿಕ ಹಣ ಪಡೆದ ಮಾರ್ಷ್ ಆಡಿರುವ 4 ಪಂದ್ಯಗಳಲ್ಲಿ ಕೇವಲ 6 ರನ್ಗಳಿಸಿದ್ದಾರೆ. ಅಂದರೆ ಮಾರ್ಷ್ ಸಿಡಿಸಿರುವ ಒಂದೊಂದು ರನ್ಗೆ ಡೆಲ್ಲಿ ತಂಡ ಇದುವರೆಗೆ ಒಂದು ಕೋಟಿ ಸಂಭಾವನೆ ನೀಡಿದಂತ್ತಾಗಿದೆ.
ಬೌಲಿಂಗ್‌ನಲ್ಲಿ ಕೊಂಚ ಸಮಾಧಾನಕರ ಪ್ರದರ್ಶನ ನೀಡಿರುವ ಮಾರ್ಷ್, ಇದುವರೆಗೆ 43 ಎಸೆತಗಳನ್ನು ಎಸೆದಿದ್ದು, ಅವರ ಖಾತೆಯಲ್ಲಿ 3 ವಿಕೆಟ್‌ಗಳು ಬಂದಿವೆ. ಈ ಸೀಸನ್ನಲ್ಲಿ ಡೆಲ್ಲಿಗೆ ಇನ್ನೂ ಕನಿಷ್ಠ 8 ಪಂದ್ಯಗಳು ಉಳಿದಿದ್ದೂ, ಈ ಪಂದ್ಯಗಳಲ್ಲಾದರೂ ಮಾರ್ಷ್ ಅಬ್ಬರಿಸಬೇಕಾಗಿದೆ.
Published On - 4:02 pm, Fri, 21 April 23