IPL 2024: 2 ಸ್ಟೇಡಿಯಂನಲ್ಲಿ ಐಪಿಎಲ್ನ ಕೊನೆಯ 4 ಪಂದ್ಯಗಳು..!
IPL 2024: ಐಪಿಎಲ್ 2024 ಅನ್ನು ವಿದೇಶಕ್ಕೆ ಶಿಫ್ಟ್ ಮಾಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಹಿಂದೆ 2009 ಹಾಗೂ 2014 ರ ಲೋಕಸಭಾ ಚುನಾವಣೆ ವೇಳೆ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಈ ಬಾರಿ ಕೂಡ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸಲಿದೆ ಎನ್ನಲಾಗಿತ್ತು. ಆದರೀಗ ಟೂರ್ನಿಯನ್ನು ಭಾರತದಲ್ಲೇ ನಡೆಸುವುದಾಗಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
Updated on: Mar 24, 2024 | 10:52 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಿರುವ ಐಪಿಎಲ್ನ ಮೊದಲಾರ್ಧದ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಇನ್ನುಳಿದ ಪಂದ್ಯದ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.

ಇದರ ನಡುವೆ ಈ ಬಾರಿಯ ಐಪಿಎಲ್ನ ಪ್ಲೇಆಫ್ ಪಂದ್ಯಗಳು ನಡೆಯುವುದೆಲ್ಲಿ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಸ್ತುತ ವರದಿ ಪ್ರಕಾರ, ಐಪಿಎಲ್ 2024ರ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

ಹಾಗೆಯೇ ಮೊದಲ ಕ್ವಾಲಿಫೈಯರ್ ಪಂದ್ಯ ಮತ್ತು ಎಲಿಮಿನೇಟರ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು 2ನೇ ಕ್ವಾಲಿಫೈಯರ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಲಿದೆ.

ಅಂದರೆ ಪ್ಲೇಆಫ್ ಹಂತದ ನಾಲ್ಕು ಪಂದ್ಯಗಳಿಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಮತ್ತು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಅದರಂತೆ ನಾಲ್ಕು ಪಂದ್ಯಗಳನ್ನು 2 ಸ್ಟೇಡಿಯಂ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ ಎಂದು ವರದಿಯಾಗಿದೆ.

ಇದಾಗ್ಯೂ ದಿನಾಂಕವನ್ನು ಇನ್ನೂ ಸಹ ನಿಗದಿ ಮಾಡಲಾಗಿಲ್ಲ. ಏಕೆಂದರೆ ಏಪ್ರಿಲ್ 19 ರಿಂದ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇದರಿಂದ ಭದ್ರತಾ ವ್ಯವಸ್ಥೆ ರೂಪಿಸಲು ತೊಡಕುಂಟಾಗಲಿದೆ. ಹೀಗಾಗಿ ಆಯಾ ರಾಜ್ಯದ ಚುನಾವಣಾ ದಿನಾಂಕವನ್ನು ಪರಿಶೀಲಿಸಿ ಐಪಿಎಲ್ನ ಉಳಿದ ಪಂದ್ಯಗಳ ವೇಳಾಪಟ್ಟಿ ಸಿದ್ಧಪಡಿಸುವಲ್ಲಿ ಬಿಸಿಸಿಐ ನಿರತವಾಗಿದೆ.

ಇತ್ತ ಜೂನ್ 1 ರಿಂದ ಟಿ20 ವಿಶ್ವಕಪ್ ಕೂಡ ಶುರುವಾಗಲಿದ್ದು, ಅದಕ್ಕೂ ಒಂದು ವಾರ ಮುಂಚಿತವಾಗಿ ಐಪಿಎಲ್ ಫೈನಲ್ ಆಯೋಜಿಸಬೇಕಿದೆ. ಹೀಗಾಗಿ ಫೈನಲ್ ಪಂದ್ಯವು ಮೇ 26 ರಂದು (ಭಾನುವಾರ) ನಡೆಯುವ ಸಾಧ್ಯತೆಯಿದೆ.



















