ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 31ನೇ ಮತ್ತು 32ನೇ ಪಂದ್ಯಗಳ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯವು ಒಂದು ದಿನ ಮುಂಚಿತವಾಗಿ ನಡೆಯಲಿದೆ ಎಂದು ತಿಳಿಸಿದೆ.
ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯವನ್ನು ಏಪ್ರಿಲ್ 17 ರಂದು ನಿಗದಿ ಮಾಡಲಾಗಿತ್ತು. ಇದೀಗ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನು ಏಪ್ರಿಲ್ 16 ಕ್ಕೆ ಮರುನಿಗದಿ ಮಾಡಲಾಗಿದೆ. ಅದರಂತೆ ಕೆಕೆಆರ್ ಮತ್ತು ಆರ್ಆರ್ ನಡುವಣ ಪಂದ್ಯ ಒಂದು ದಿನ ಮುಂಚಿತವಾಗಿ ಜರುಗಲಿದೆ.
ಹಾಗೆಯೇ ಏಪ್ರಿಲ್ 16 ರಂದು ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಒಂದು ದಿನ ತಡವಾಗಿ ಆಯೋಜಿಸಲಾಗುತ್ತಿದೆ. ಅದರಂತೆ ಏಪ್ರಿಲ್ 17 ರಂದು ಅಹಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕಿಳಿಯಲಿದೆ.
ಈ ಪಂದ್ಯಗಳ ಮರುನಿಗದಿ ಬಗ್ಗೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಆದರೆ ರಾಮನವಮಿ ಪ್ರಯುಕ್ತ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 17 ರಂದು ರಾಮನವಮಿ ನಡೆಯಲಿದ್ದು, ಈ ವೇಳೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಪೂರ್ಣ ಭದ್ರತೆ ಒದಗಿಸುವುದು ಕಷ್ಟಕರ. ಹೀಗಾಗಿ ಪಂದ್ಯವನ್ನು ಮರುನಿಗದಿ ಮಾಡುವಂತೆ ಕೊಲ್ಕತ್ತಾ ಪೊಲೀಸ್ ಕಮಿಷನರ್ ಬಿಸಿಸಿಐಗೆ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಅದರಂತೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯವು ಒಂದು ದಿನ ಮುಂಚಿತವಾಗಿ ನಡೆದರೆ, ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಒಂದು ದಿನ ತಡವಾಗಿ ಜರುಗಲಿದೆ.
Published On - 4:40 pm, Tue, 2 April 24