- Kannada News Photo gallery Cricket photos IPL 2024: RCB batter Virat Kohli fined 50 percent of his match fee
Virat Kohli: ಅಂದು 1 ಕೋಟಿ ರೂ, ಇಂದು 53 ಲಕ್ಷ ರೂ. ದಂಡ..!
IPL 2024: ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಭಾರೀ ದಂಡದ ಶಿಕ್ಷೆಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇಡೀ ಪಂದ್ಯದ ಶುಲ್ಕವನ್ನು ದಂಡವಾಗಿ ಪಾವತಿಸಿದ್ದರು. ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ ಕಿಂಗ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ಫೈನ್ ವಿಧಿಸಲಾಗಿದೆ.
Updated on: Apr 23, 2024 | 4:30 PM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 36ನೇ ಪಂದ್ಯದಲ್ಲಿ ಅಂಪೈರ್ ಜೊತೆ ಅನುಚಿತವಾಗಿ ವರ್ತಿಸಿದ ವಿರಾಟ್ ಕೊಹ್ಲಿಗೆ (Virat Kohli) ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಅಂಪೈರ್ ನೀಡಿದ ಔಟ್ ತೀರ್ಪನ್ನು ಪ್ರಶ್ನಿಸಿ ಕೊಹ್ಲಿ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು.

ಹರ್ಷಿತ್ ರಾಣ ಎಸೆದ 3ನೇ ಓವರ್ನ ಮೊದಲ ಎಸೆತವು ಬೀಮರ್ ರೂಪದಲ್ಲಿ ಮೂಡಿಬಂದಿತ್ತು. ಈ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ಕೊಹ್ಲಿ ಕ್ಯಾಚ್ ನೀಡಿದ್ದರು. ತಕ್ಷಣವೇ ಕೊಹ್ಲಿ ನೋಬಾಲ್ಗಾಗಿ ರಿವ್ಯೂ ಮೊರೆ ಹೋದರು. ರಿವ್ಯೂನಲ್ಲಿ ಚೆಂಡು ವಿರಾಟ್ ಕೊಹ್ಲಿಯ ಸೊಂಟಕ್ಕಿಂತ ಮೇಲ್ಭಾಗದಲ್ಲಿರುವುದು ಕಂಡು ಬಂತು. ಆದರೆ ಅವರು ಕ್ರೀಸ್ನಿಂದ ಹೊರಗೆ ನಿಂತು ಚೆಂಡನ್ನು ಎದುರಿಸಿದ್ದರು. ಹೀಗಾಗಿ ಮೂರನೇ ಅಂಪೈರ್ ಅದು ನೋಬಾಲ್ ಅಲ್ಲ, ಔಟ್ ಎಂದು ತೀರ್ಪು ನೀಡಿದ್ದರು.

ಈ ತೀರ್ಪು ಪ್ರಕಟವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್ಗಳ ಜೊತೆ ವಾಗ್ವಾದಕ್ಕಿಳಿದರು. ಅಲ್ಲದೆ ಆಕ್ರೋಶದೊಂದಿಗೆ ಪೆವಿಲಿಯನ್ಗೆ ಮರಳಿದ ಕೊಹ್ಲಿ ಕಸದ ಡಬ್ಬಿಯನ್ನು ಕೈಯಿಂದ ಗುದ್ದುವ ಮೂಲಕ ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮ್ಯಾಚ್ ರೆಫರಿ ಇದೀಗ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿದೆ. ಅದರಂತೆ ಕೊಹ್ಲಿ 53 ಲಕ್ಷ ರೂ. ದಂಡದ ಮೊತ್ತ ಪಾವತಿಸಬೇಕಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಹೀಗೆ ಭಾರೀ ಮೊತ್ತವನ್ನು ದಂಡವಾಗಿ ಪಾವತಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದರು. ಈ ಘಟನೆ ಹಿನ್ನಲೆಯಲ್ಲಿ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಲಾಗಿತ್ತು.

ಅದರಂತೆ ವಿರಾಟ್ ಕೊಹ್ಲಿ ತಮ್ಮ ಪಂದ್ಯದ ಶುಲ್ಕವಾದ 1.07 ಕೋಟಿ ರೂ. ದಂಡ ಪಾವತಿಸಿದ್ದರು. ಇದೀಗ ಮತ್ತೊಮ್ಮೆ ಕಿಂಗ್ ಕೊಹ್ಲಿ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. ಅದರಂತೆ ಈ ಬಾರಿ 53 ಲಕ್ಷ ರೂ. ದಂಡ ಪಾವತಿಸಲಿದ್ದಾರೆ.
