- Kannada News Photo gallery Cricket photos IPL 2025: Faf Du Plessis as Captain Won CPL 2024 Trophy for St Lucia
ನಾಯಕನಾಗಿ ಮಿಂಚಿದ ಫಾಫ್ ಡುಪ್ಲೆಸಿಸ್: RCB ತಂಡದ ಮುಂದಿನ ನಡೆಯೇನು?
Faf Du Plessis: 2024 ರಲ್ಲಿ ಫಾಫ್ ಡುಪ್ಲೆಸಿಸ್ ನಾಲ್ಕು ತಂಡಗಳನ್ನು ಮುನ್ನಡೆಸಿದ್ದಾರೆ. ಈ ನಾಲ್ಕು ತಂಡಗಳು ಕೂಡ ಪ್ಲೇಆಫ್ ಹಂತಕ್ಕೇರಿದೆ. ಅದರಲ್ಲೂ ಐಪಿಎಲ್ನಲ್ಲಿ ಆರ್ಸಿಬಿ ತಂಡ ಎಲಿಮಿನೇಟರ್ ಪಂದ್ಯವಾಡಿತ್ತು. ಇದೀಗ ಫಾಫ್ ಡುಪ್ಲೆಸಿಸ್ ನೇತೃತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Updated on: Oct 07, 2024 | 1:00 PM

ಕೆರಿಬಿಯನ್ ಪ್ರೀಮಿಯರ್ ಲೀಗ್ನ 12ನೇ ಸೀಸನ್ಗೆ ತೆರೆ ಬಿದ್ದಿದೆ. ಈ ಬಾರಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ 11 ಸೀಸನ್ಗಳಲ್ಲಿ ವೈಫಲ್ಯ ಹೊಂದಿದ್ದ ಲೂಸಿಯಾ ಕಿಂಗ್ಸ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೊಡುವಲ್ಲಿ ಕೊನೆಗೂ ಡುಪ್ಲೆಸಿಸ್ ಯಶಸ್ವಿಯಾಗಿದ್ದಾರೆ.

ಈ ಯಶಸ್ಸಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮುಂದಿನ ನಡೆಯೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಆರ್ಸಿಬಿ ಬಾರಿಯ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಆದರೀಗ ಅದೇ ಡುಪ್ಲೆಸಿಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಸೇಂಟ್ ಲೂಸಿಯಾ ಕಿಂಗ್ಸ್ ಫ್ರಾಂಚೈಸಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅದು ಸಹ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ 12 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಫಾಫ್ ಡುಪ್ಲೆಸಿಸ್ 4 ಅರ್ಧಶತಕಗಳೊಂದಿಗೆ ಒಟ್ಟು 405 ರನ್ ಕಲೆಹಾಕಿದ್ದಾರೆ. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇಂತಹದೊಂದು ಅದ್ಭುತ ಪ್ರದರ್ಶನ ನೀಡಿದ ಫಾಫ್ ಡುಪ್ಲೆಸಿಸ್ ಅವರನ್ನು ಆರ್ಸಿಬಿ ಕೈ ಬಿಡಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ 2024 ರಲ್ಲಿ ಡುಪ್ಲೆಸಿಸ್ ನೇತೃತ್ವದ ನಾಲ್ಕು ತಂಡಗಳು ಪ್ಲೇಆಫ್ ಹಂತಕ್ಕೇರಿದೆ. ಐಪಿಎಲ್ನಲ್ಲಿ ಫಾಫ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಆರ್ಸಿಬಿ ತಂಡವು ಎಲಿಮಿನೇಟ್ ಪಂದ್ಯದವರೆಗೆ ಮುನ್ನುಗ್ಗಿತ್ತು.

ಇನ್ನು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಕ್ವಾಲಿಫೈಯರ್-2 ವರೆಗೂ ತಂಡವನ್ನು ಕೊಂಡೊಯ್ದಿದ್ದರು. ಹಾಗೆಯೇ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಫಾಫ್ ನೇತೃತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-2 ಹಂತಕ್ಕೇರಿತ್ತು.

ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿಯೇ ಯಶಸ್ಸಿನ ಹಾದಿಯಲ್ಲಿರುವ ಡುಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕನಾಗಿ ಮುಂದುವರೆಸಲಿದೆಯಾ? ಅಥವಾ ತಂಡದಿಂದ ಕೈ ಬಿಡಲಿದೆಯಾ ಎಂಬ ಕುತೂಹಲ ಹುಟ್ಟಿಕೊಂಡಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಅಕ್ಟೋಬರ್ 31 ರೊಳಗೆ ಸ್ಪಷ್ಟ ಉತ್ತರ ಸಿಗಲಿದ್ದು, ಅಲ್ಲಿಯವರೆಗೆ ಕಾಯಲೇಬೇಕು.




