IPL 2025: ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಕೆಎಲ್ ರಾಹುಲ್ ಅಲಭ್ಯ
IPL 2025 KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ. ಅದು ಕೂಡ ಬರೋಬ್ಬರಿ 14 ಕೋಟಿ ರೂ. ನೀಡುವ ಮೂಲಕ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ.
Updated on: Mar 13, 2025 | 9:04 AM

ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಖುಷಿಯಲ್ಲಿರುವ ಕೆಎಲ್ ರಾಹುಲ್ ಮುಂಬರುವ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಈ ಬಾರಿಯ ಟೂರ್ನಿಯ ಮೊದಲಾರ್ಧದ ಕೆಲ ಪಂದ್ಯಗಳಿಂದ ಕನ್ನಡಿಗ ಹೊರಗುಳಿಯಲಿದ್ದು, ಏಪ್ರಿಲ್ ಮಧ್ಯ ಭಾಗದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಮುಖ್ಯ ಕಾರಣ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ದಂಪತಿ ಮೊದಲ ಮಗುವಿನ ನಿರೀಕ್ದೆಯಲ್ಲಿರುವುದು. ಗರ್ಭಿಣಿಯಾಗಿರುವ ಆಥಿಯಾಗೆ ವೈದ್ಯರು ಮುಂದಿನ ತಿಂಗಳು ಡೆಲಿವರಿ ಡೇಟ್ ನೀಡಿದ್ದಾರೆ. ಹೀಗಾಗಿ ಏಪ್ರಿಲ್ನಲ್ಲಿ ಕೆಎಲ್ ರಾಹುಲ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ.

ಇತ್ತ ಪತ್ನಿಯೊಂದಿಗೆ ಸಮಯ ಕಳೆಯುವ ಉದ್ದೇಶದಿಂದಾಗಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಮೂರು-ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರು ಏಪ್ರಿಲ್ ಮಧ್ಯ ಭಾಗದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಅವರಿಗೆ ನಾಯಕತ್ವ ನೀಡಲು ಆಸಕ್ತಿ ತೋರಿದ್ದರು. ಆದರೆ ಕನ್ನಡಿಗ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಈ ಬಾರಿ ಆಟಗಾರನಾಗಿ ತಂಡಕ್ಕೆ ಕೊಡುಗೆ ನೀಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಷರ್ ಪಟೇಲ್ ಅಥವಾ ಫಾಫ್ ಡುಪ್ಲೆಸಿಸ್ ಮುನ್ನಡೆಸುವ ಸಾಧ್ಯತೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಹ್ಯಾರಿ ಬ್ರೂಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ.ನಟರಾಜನ್, ಕರುಣ್ ನಾಯರ್, ಸಮೀರ್ ರಿಝ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ.
























