- Kannada News Photo gallery Cricket photos IPL 2025: Rohit Sharma Creates History, Breaks Huge Record
Rohit Sharma: ಹಿಟ್ಮ್ಯಾನ್ ಧೂಮ್ ಧಮಾಕಾ: ಭರ್ಜರಿ ದಾಖಲೆ ನಿರ್ಮಾಣ
IPL 2025 SRH vs MI: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 41ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 143 ರನ್ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಮುಂಬೈ ಇಂಡಿಯನ್ಸ್ ತಂಡವು 15.4 ಓವರ್ಗಳಲ್ಲಿ 146 ರನ್ ಬಾರಿಸಿ 7 ವಿಕೆಟ್ಗಳ ಜಯ ಸಾಧಿಸಿದೆ.
Updated on: Apr 24, 2025 | 1:54 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಬ್ಯಾಟಿಂಗ್ನೊಂದಿಗೆ ಹಲವು ದಾಖಲೆಗಳನ್ನು ಸಹ ನಿರ್ಮಿಸಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 143 ರನ್ ಕಲೆಹಾಕಿತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು. ಬಿರುಸಿನ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ ಹಿಟ್ಮ್ಯಾನ್ 46 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 70 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ವಿಶೇಷ ಮೈಲುಗಲ್ಲು ದಾಟಿದ್ದಾರೆ.

ಎಸ್ಆರ್ಹೆಚ್ ವಿರುದ್ಧ ಬಾರಿಸಿದ 70 ರನ್ಗಳೊಂದಿಗೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ದಾಖಲೆ ಬರೆದ ವಿಶ್ವದ 8ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಬಾರಿಸಿದ 3 ಸಿಕ್ಸರ್ಗಳೊಂದಿಗೆ ಮುಂಬೈ ಇಂಡಿಯನ್ಸ್ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಕೀರನ್ ಪೊಲಾರ್ಡ್ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ 193 ಇನಿಂಗ್ಸ್ಗಳಲ್ಲಿ 258 ಸಿಕ್ಸ್ ಸಿಡಿಸಿ ಪೊಲಾರ್ಡ್ ಈ ದಾಖಲೆ ಬರೆದಿದ್ದರು.

ಇದೀಗ 225 ಇನಿಂಗ್ಸ್ಗಳ ಮೂಲಕ 260 ಸಿಕ್ಸ್ ಸಿಡಿಸಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಹಿಟ್ಮ್ಯಾನ್ ಇದೀಗ ಬ್ಯಾಕ್ ಟು ಬ್ಯಾಕ್ 2 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದು, ಈ ಭರ್ಜರಿ ಪ್ರದರ್ಶನದೊಂದಿಗೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಫೈನಲ್ಗೇರಿಸಲಿದೆಯಾ ಕಾದು ನೋಡಬೇಕಿದೆ.



















