- Kannada News Photo gallery Cricket photos IPL 2026: Sanju Samson may lose Rajasthan Royals captaincy
IPL 2026: ನಾಯಕತ್ವದಿಂದ ಸಂಜು ಸ್ಯಾಮ್ಸನ್ ಔಟ್: ಇಬ್ಬರ ನಡುವೆ ಪೈಪೋಟಿ
Rajasthan Royals: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ರಾಹುಲ್ ದ್ರಾವಿಡ್ ತ್ಯಜಿಸಿದ್ದಾರೆ. ಅತ್ತ ಪ್ರಸ್ತುತ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಆರ್ಆರ್ ತಂಡವನ್ನು ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತ ಎನ್ನಬಹುದು.
Updated on: Sep 06, 2025 | 9:04 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಅವರು ಮುಂದಿನ ಸೀಸನ್ನಲ್ಲಿ ಆರ್ಆರ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವಕ್ಕಾಗಿ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಪೈಪೋಟಿ ಇದೆ ಎಂದು ವರದಿಯಾಗಿತ್ತು. ಇದೀಗ ಪ್ರಸ್ತುತ ತಂಡದ ನಾಯಕ ಸ್ಯಾಮ್ಸನ್ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಒಂದು ವೇಳೆ ಸಂಜು ಸ್ಯಾಮ್ಸನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಅವರು ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಮುಂದುವರೆಯುವ ಸಾಧ್ಯತೆಯಿಲ್ಲ. ಏಕೆಂದರೆ ಸ್ಯಾಮ್ಸನ್ ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಆಸಕ್ತಿ ಹೊಂದಿವೆ. ಹೀಗಾಗಿ ಆರ್ಆರ್ ತಂಡದ ನಾಯಕತ್ವ ಕೈ ತಪ್ಪಿದರೆ ಸ್ಯಾಮ್ಸನ್ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸುವ ಸಾಧ್ಯತೆ ಹೆಚ್ಚಿದೆ.

ಅತ್ತ ಸಂಜು ಸ್ಯಾಮ್ಸನ್ ಅವರಿಂದ ತೆರವಾಗಲಿರುವ ನಾಯಕನ ಸ್ಥಾನಕ್ಕೆ ಈಗಾಗಲೇ ರಿಯಾನ್ ಪರಾಗ್ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ವರದಿಯಾಗಿದೆ. ಆರ್ಆರ್ ಫ್ರಾಂಚೈಸಿಯ ಒಂದು ಗುಂಪು ರಿಯಾನ್ ಪರಾಗ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಆದರೆ ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮತ್ತೊಂದು ಗುಂಪು ಯಶಸ್ವಿ ಜೈಸ್ವಾಲ್ ಅವರಿಗೆ ನಾಯಕತ್ವ ನೀಡಬೇಕೆಂಬ ವಾದ ಮುಂಡಿದುತ್ತಿದ್ದಾರೆ. ಜೈಸ್ವಾಲ್ ಕಳೆದ ಕೆಲ ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭವಿಷ್ಯ ದೃಷ್ಟಿಯಿಂದ ಜೈಸ್ವಾಲ್ಗೆ ಕ್ಯಾಪ್ಟನ್ ಪಟ್ಟ ನೀಡುವುದು ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ. ಹೀಗಾಗಿ ರಿಯಾನ್ ಪರಾಗ್ ಅಥವಾ ಯಶಸ್ವಿ ಜೈಸ್ವಾಲ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ಒಲಿಯುವುದು ಖಚಿತ ಎನ್ನಬಹುದು.




