- Kannada News Photo gallery Cricket photos IPL 2026: Venkatesh Iyer will replace Devdutt Padikkal Spot
IPL 2026: ವೆಂಕಿಯ ಎಂಟ್ರಿಯಿಂದ ಕನ್ನಡಿಗನ ಸ್ಥಾನಕ್ಕೆ ಕುತ್ತು..!
IPL 2026 RCB Squad: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 2026ರ ಹರಾಜಿಗೂ ಮುನ್ನ 17 ಆಟಗಾರರನ್ನು ರಿಟೈನ್ ಮಾಡಿ ಕೊಂಡಿದ್ದರು. ಇದೀಗ ಮಿನಿ ಹರಾಜಿನ ಮೂಲಕ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಐಪಿಎಲ್ ಸೀಸನ್-19 ಗಾಗಿ 25 ಸದಸ್ಯರ ಬಳಗವನ್ನು ರೂಪಿಸಿದೆ.
Updated on: Dec 17, 2025 | 11:55 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮಧ್ಯಪ್ರದೇಶದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಎಂಟ್ರಿ ಕೊಟ್ಟಿದ್ದಾರೆ. ಅಬುಧಾಬಿಯಲ್ಲಿ ಮಂಗಳವಾರ (ಡಿ.16) ನಡೆದ ಐಪಿಎಲ್ ಮಿನಿ ಹರಾಜಿನ ಮೂಲಕ ಆರ್ಸಿಬಿ ವೆಂಕಟೇಶ್ ಅವರನ್ನು 7 ಕೋಟಿ ರೂ.ಗೆ ಖರೀದಿಸಿದೆ.

ಆಲ್ರೌಂಡರ್ ಆಗಿರುವ ವೆಂಕಟೇಶ್ ಅಯ್ಯರ್ ಖರೀದಿಗೆ ಕಳೆದ ಸೀಸನ್ನಲ್ಲೇ ಆರ್ಸಿಬಿ ಪ್ರಯತ್ನಿಸಿತ್ತು. ಆದರೆ ಐಪಿಎಲ್ 2026 ರಲ್ಲಿ ಅಯ್ಯರ್ 23.75 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದರು. ಈ ಬಾರಿ ಕೇವಲ 7 ಕೋಟಿ ರೂ. ನೀಡುವ ಮೂಲಕ ಎಡಗೈ ದಾಂಡಿಗನನ್ನು ತಂಡಕ್ಕೆ ಕರೆತರುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ.

ಇತ್ತ ವೆಂಕಟೇಶ್ ಅಯ್ಯರ್ ಎಂಟ್ರಿಯೊಂದಿಗೆ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ಆರ್ಸಿಬಿ ತಂಡದ ಅಗ್ರ ಕ್ರಮಾಂಕದಲ್ಲಿ ಯಾವುದೇ ಆಲ್ರೌಂಡರ್ಗಳಿಲ್ಲ. ಆರಂಭಿಕರಾಗಿ ಕಣಕ್ಕಿಳಿಯುವ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಪರಿಪೂರ್ಣ ಬ್ಯಾಟರ್ಗಳು.

ಇನ್ನು ಮೂರನೇ ಮತ್ತು ನಾಲ್ಕನೇ ಕ್ರಮಾಂಕಗಳಲ್ಲಿ ಕಣಕ್ಕಿಳಿಯುವ ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟಿದಾರ್ ಕೂಡ ಬ್ಯಾಟರ್ಗಳು. ಇತ್ತ ವೆಂಟಕೇಶ್ ಅಯ್ಯರ್ ಕೂಡ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್. ಹೀಗಾಗಿ ಟಾಪ್-4 ನಲ್ಲೇ ಅವರಿಗೆ ಸ್ಥಾನ ನೀಡಬೇಕಾಗುತ್ತದೆ.

ಅತ್ತ ಆರ್ಸಿಬಿ ತಂಡದ ಆರಂಭಿಕರು ಬದಲಾಗುವ ಸಾಧ್ಯತೆಯಿಲ್ಲ. ಮುಂದಿನ ಸೀಸನ್ನಲ್ಲೂ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮುಂದುವರೆಯಲಿದ್ದಾರೆ. ಇನ್ನು ನಾಯಕ ರಜತ್ ಪಾಟಿದಾರ್ ಕಣಕ್ಕಿಳಿಯುವುದು ಖಚಿತ. ಇದರ ನಡುವೆ ದೇವದತ್ ಪಡಿಕ್ಕಲ್ ಅವರನ್ನು ಹೊರಗಿಟ್ಟರೆ ಮಾತ್ರ ವೆಂಟಕೇಶ್ ಅಯ್ಯರ್ ಅವರನ್ನು ಕಣಕ್ಕಿಳಿಸಬಹುದು.

ಅಂದರೆ ಆರ್ಸಿಬಿ ಪರ ವೆಂಕಟೇಶ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಇದರಿಂದ ದೇವದತ್ ಪಡಿಕ್ಕಲ್ ಅವಕಾಶ ವಂಚಿತರಾಗುವ ಸಾಧ್ಯತೆಗಳಿವೆ. ಏಕೆಂದರೆ ವೆಂಕಿ ಆಲ್ರೌಂಡರ್ ಆಟಗಾರ. ಅವರ ಆಯ್ಕೆಯಿಂದ ಹೆಚ್ಚುವರಿ ಬೌಲರ್ನ ಆಯ್ಕೆ ಕೂಡ ಆರ್ಸಿಬಿ ತಂಡಕ್ಕೆ ಲಭ್ಯವಾಗಲಿದೆ. ಹೀಗಾಗಿ ವೆಂಕಟೇಶ್ ಅಯ್ಯರ್ ಎಂಟ್ರಿಯಿಂದಾಗಿ ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಕುತ್ತು ಬರುವುದು ಖಚಿತ ಎಂದೇ ಹೇಳಬಹುದು.

RCB ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ದಾರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಜೋರ್ಡನ್ ಕಾಕ್ಸ್, ಜೇಕಬ್ ಡಫಿ, ವಿಕ್ಸಿ ಒಸ್ತ್ವಾಲ್, ಕಾನಿಷ್ಕ್ ಚೌಹಾನ್, ಸತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರ.




