
2026 ರ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರಿಂದ ಅವರ ಅಭಿಮಾನಿಗಳು ಯಾವ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಿದ್ದರೋ ಅದೇ ರೀತಿಯ ಪ್ರದರ್ಶನ ಮೊದಲ ಪಂದ್ಯದಲ್ಲೇ ಮೂಡಿಬಂದಿದೆ. ಈ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿ ಬೊಬ್ಬಿರಿದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆರಂಭದಿಂದಲೇ ಬೌಂಡರಿ, ಸಿಕ್ಸರ್ಗಳ ಮಳೆಗರೆದ ರೋಹಿತ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರ ಜೊತೆಗೆ ಈ ಇನ್ನಿಂಗ್ಸ್‌ನಲ್ಲಿ, ಹಿಟ್‌ಮ್ಯಾನ್ ಹಲವಾರು ಪ್ರಮುಖ ದಾಖಲೆಗಳನ್ನು ಸೃಷ್ಟಿಸಿದರು.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬರೋಬ್ಬರಿ 6 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಅದರಲ್ಲಿ ರೋಹಿತ್ ಶರ್ಮಾ ಮೂರು ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೂಲಕ ರೋಹಿತ್ ಟಿ20 ಸ್ವರೂಪದಲ್ಲಿ 550 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಏಷ್ಯಾದ ಆಟಗಾರ ಮತ್ತು ವಿಶ್ವದ ಒಂಬತ್ತನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

ಹಾಗೆಯೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ 1100 ರನ್ಗಳ ಗಡಿ ಕೂಡ ದಾಟಿಸಿದರು. ಈ ಮೂಲಕ ಕೆಕೆಆರ್ ವಿರುದ್ಧ ಇಷ್ಟೊಂದು ರನ್ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

ಪವರ್‌ಪ್ಲೇ ಒಳಗೆ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ, ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪವರ್‌ಪ್ಲೇಯಲ್ಲಿ 50 ರನ್ ಗಳಿಸಿದ ದಾಖಲೆ ಬರೆದರು. ಹಾಗೆಯೇ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು.