
ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ವಿಶ್ವಕಪ್ ಅಖಾಡಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ತಂಡದಲ್ಲಿ ಗಾಯದ ಸರಣಿ ಮುಂದುವರೆದಿದ್ದು, ಇದೀಗ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್ ಅಭ್ಯಾಸ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ.

ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ಇಶಾನ್ ಕಿಶನ್ ಗಾಯದ ರೂಪದಲ್ಲಿ ಈ ಆಘಾತ ಎದುರಾಗಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಇಶಾನ್ ಗಾಯಗೊಂಡಿದ್ದಾರೆ. ಅದು ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಎಂದು ತಿಳಿದುಬಂದಿದೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿತ್ತು. ಈ ವೇಳೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಬುಮ್ರಾ ಯಾರ್ಕರ್ ಬೌಲ್ ಮಾಡಿದ್ದಾರೆ. ಆದರೆ ಕಿಶನ್ಗೆ ಈ ಯಾರ್ಕರ್ನ ಕ್ಲೀಯರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಟ್ನಿಂದ ತಪ್ಪಿಸಿಕೊಂಡು ಬಂದ ಚೆಂಡು ಕಿಶನ್ ಅವರ ಎಡಗಾಲಿನ ಬೆರಳಿಗೆ ತಗುಲಿದೆ.

ಚೆಂಡು ಬಿದ್ದ ರಬಸಕ್ಕೆ ಕಿಶನ್ ನೋವಿನಿಂದ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಅಭ್ಯಾಸವನ್ನು ನಿಲ್ಲಿಸಿ ನೆಟ್ಸ್‌ನಿಂದ ಹೊರನಡೆದಿದ್ದಾರೆ. ಇದನ್ನು ನೋಡಿದ ತಂಡದ ಫಿಸಿಯೋ ತಕ್ಷಣವೇ ಕಿಶನ್ ಅವರ ಬಳಿ ಬಂದು ಅವರನ್ನು ಪರೀಕ್ಷಿಸಿದ್ದಾರೆ. ಚಿಕಿತ್ಸೆಯ ನಂತರ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಕಿಶನ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಆದಾಗ್ಯೂ ಕಿಶನ್ ನೋವಿನಿಂದ ಬಳಲುತ್ತಿದ್ದದ್ದು ಸ್ಪಷ್ಟವಾಗಿ ಕಂಡುಬಂತು.

‘ ಕಿಶನ್ ಅವರ ಗಾಯದ ತೀವ್ರತೆ ಎಷ್ಟು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಒಂದು ವೇಳೆ ಕಿಶನ್ಗೆ ಗಾಯ ಗಂಭೀರವಾಗಿದ್ದರೆ ಅದು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಈಗಾಗಲೇ ಅಭಿಷೇಕ್ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಕಿಶನ್ ಗಾಯಗೊಂಡಿರುವುದು ತಂಡಕ್ಕೆ ಆರಂಭಿಕರಿಲ್ಲದಂತೆ ಮಾಡಿದೆ. ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಇದ್ದಾರೆಯಾದರೂ, ಕಿಶನ್ ಬದಲಿಗೆ ಯಾರು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.
Published On - 9:15 pm, Wed, 11 February 26