ಭಲೇ ಬಟ್ಲರ್… ಅತೀ ಕಡಿಮೆ ಎಸೆತಗಳಲ್ಲಿ ವಿಶ್ವ ದಾಖಲೆ..!
Jos Buttler World Record: ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 4000 ರನ್ ಕಲೆಹಾಕಿರುವುದು ಕೇವಲ ನಾಲ್ವರು ಬ್ಯಾಟರ್ಗಳು ಮಾತ್ರ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಆಝಂ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಭಾರತದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇದ್ದಾರೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಜೋಸ್ ಬಟ್ಲರ್.
Updated on: Feb 15, 2026 | 8:25 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಇಂಗ್ಲೆಂಡ್ನ ಜೋಸ್ ಬಟ್ಲರ್ (Jos Buttler). ಅದು ಸಹ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಪರ ಆರಂಭಿಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ 3 ರನ್ಗಳಿಸಿ ಔಟಾಗಿದ್ದರು. ಈ ಮೂರು ರನ್ಗಳೊಂದಿಗೆ ಬಟ್ಲರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 4000 ರನ್ ಪೂರೈಸಿದ್ದಾರೆ.

ಅದು ಸಹ ಕೇವಲ 2670 ಎಸೆತಗಳಲ್ಲಿ ಎಂಬುದು ವಿಶೇಷ. ಇದರೊಂದಿಗೆ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 4 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಜೋಸ್ ಬಟ್ಲರ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು.

ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 2860 ಎಸೆತಗಳಲ್ಲಿ 4000 ರನ್ ಪೂರೈಸಿದ್ದರು. ಈ ಮೂಲಕ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 4 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ನಿರ್ಮಿಸಿದ್ದರು.

ಇದೀಗ ಈ ಭರ್ಜರಿ ದಾಖಲೆ ಮುರಿಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದಾರೆ. ಕೇವಲ 2670 ಎಸೆತಗಳಲ್ಲಿ 4 ಸಾವಿರ ರನ್ ಪೂರೈಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 4000 ರನ್ಗಳ ಗಡಿ ಮುಟ್ಟಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
