IPL 2022 Final: ಸಿಕ್ಸ್ಗಳ ಮೂಲಕವೇ ಬಟ್ಲರ್ ಗಳಿಸಿದ ರನ್ ಎಷ್ಟು? ಪಾಂಡ್ಯ ಮುಂದಿದೆ ಭರ್ಜರಿ ದಾಖಲೆ..!
IPL 2022 Records: ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಒಬ್ಬ ಬ್ಯಾಟ್ಸ್‌ಮನ್ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕಗಳ ನೆರವಿನಿಂದ 973 ರನ್ ಗಳಿಸಿದ್ದರು.
Updated on:May 28, 2022 | 1:26 PM

IPL 2022 ರಲ್ಲಿ ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಆಡಿದ 16 ಪಂದ್ಯಗಳಲ್ಲಿ 4 ಶತಕ ಮತ್ತು 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ 59ರ ಸರಾಸರಿಯಲ್ಲಿ 824 ರನ್ ಗಳಿಸಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು 2ನೇ ಬಾರಿಗೆ ಫೈನಲ್ಗೆ ಕೊಂಡೊಯ್ಯುವಲ್ಲಿ ಜೋಸ್ ಬಟ್ಲರ್ ಪ್ರಮುಖ ಪಾತ್ರವಹಿಸಿದ್ದಾರೆ.

ಮೇ 29 ರಂದು ಐಪಿಎಲ್ 2022 ರ ಫೈನಲ್‌ನಲ್ಲಿ ರಾಜಸ್ಥಾನವು ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಇತ್ತ ಗುಜರಾತ್ ತಂಡ ಚೊಚ್ಚಲ ಬಾರಿಗೆ ಫೈನಲ್ ಆಡುತ್ತಿದೆ. ಕ್ವಾಲಿಫೈಯರ್-1ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ತಂಡವು ಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಅಂತಿಮ ಹಣಾಹಣಿ ಮತ್ತಷ್ಟು ರೋಚಕವಾಗಿರಲಿದೆ.

ಇನ್ನು ಈ ಟೂರ್ನಿಯುದ್ದಕ್ಕೂ ಜೋಸ್ ಬಟ್ಲರ್ ಅಬ್ಬರಿಸುತ್ತಾ ಬಂದಿದ್ದಾರೆ. ಕಳೆದ 16 ಪಂದ್ಯಗಳಲ್ಲಿ ಬಟ್ಲರ್ 78 ಫೋರ್ ಮತ್ತು 45 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅಂದರೆ ಕೇವಲ ಸಿಕ್ಸ್ಗಳಿಂದಲೇ 270 ರನ್ ಹಾಗೂ ಫೋರ್ಗಳಿಂದ 312 ರನ್ ಕಲೆಹಾಕಿದ್ದಾರೆ. ಈ ಮೂಲಕ ಬೌಂಡರಿಗಳಿಂದ ಒಟ್ಟು 582 ರನ್ ಬಾರಿಸಿದ್ದಾರೆ. ವಿಶೇಷ ಎಂದರೆ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ 616 ರನ್ ಬಾರಿಸಿದ್ದಾರೆ. ಇದಾಗ್ಯೂ ಬೇರೆ ಯಾವುದೇ ಬ್ಯಾಟ್ಸ್‌ಮನ್ 580 ಕ್ಕಿಂತ ಅಧಿಕ ಮೊತ್ತ ಗಳಿಸಿಲ್ಲ. ಇತ್ತ ಬಟ್ಲರ್ ಸಿಕ್ಸ್-ಫೋರ್ಗಳ ಮೂಲಕ 582 ರನ್ ಕಲೆಹಾಕಿರುವುದೇ ವಿಶೇಷ.

ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಒಬ್ಬ ಬ್ಯಾಟ್ಸ್‌ಮನ್ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ 7 ಅರ್ಧ ಶತಕಗಳ ನೆರವಿನಿಂದ 973 ರನ್ ಗಳಿಸಿದ್ದರು. ಅದೇ ಸೀಸನ್ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್ ವಾರ್ನರ್ 9 ಅರ್ಧ ಶತಕಗಳ ನೆರವಿನಿಂದ 848 ರನ್ ಗಳಿಸಿದರು. ಇದೀಗ ಜೋಸ್ ಬಟ್ಲರ್ 824 ರನ್ ಕಲೆಹಾಕುವ ಮೂಲಕ ಐಪಿಎಲ್ನಲ್ಲಿ 800 ರನ್ಗಳಿಸಿದ 3ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ 25 ರನ್ ಗಳಿಸಿದರೆ ವಾರ್ನರ್ ಅವರನ್ನು ಹಿಂದಿಕ್ಕಲಿದ್ದಾರೆ.

ಅದೇ ರೀತಿ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಶೇನ್ ವಾರ್ನ್ ದಾಖಲೆಯನ್ನು ಸರಿಗಟ್ಟುವ ತವಕದಲ್ಲಿದ್ದಾರೆ. ಅಂದರೆ 2008 ರ ಐಪಿಎಲ್ನ ಮೊದಲ ಸೀಸನ್‌ನಲ್ಲಿ ನಾಯಕನಾಗಿ ವಾರ್ನ್ ಐಪಿಎಲ್ ಪ್ರಶಸ್ತಿ ಗೆದ್ದಿದ್ದರು. ಇದೀಗ ಈ ಸಾಧನೆ ಮಾಡಲು ಪಾಂಡ್ಯ ಒಂದು ಪಂದ್ಯ ಮಾತ್ರ ಗೆಲ್ಲಬೇಕಿದೆ. ಅಲ್ಲದೆ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದರೆ ಈ ಸಾಧನೆ ಮಾಡಿದ ಕಿರಿಯ ನಾಯಕ ಎಂಬ ದಾಖಲೆ ಹಾರ್ದಿಕ್ ಪಾಂಡ್ಯ ಪಾಲಾಗಲಿದೆ.
Published On - 1:26 pm, Sat, 28 May 22



















