- Kannada News Photo gallery Cricket photos Kagiso Rabada becomes the first bowler to bowl consecutive maidens in the powerplay in SA20
ಶೂನ್ಯಗಳ ಸರಮಾಲೆ: ಕಗಿಸೊ ರಬಾಡ ಬೆಂಕಿ ಬೌಲಿಂಗ್
SA20 2025: ಸೌತ್ ಆಫ್ರಿಕಾ ಟಿ20 ಲೀಗ್ನ 6ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕತ್ವದ ಎಂಐ ಕೇಪ್ಟೌನ್ ತಂಡವು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಒಡೆತನದ ಪಾರ್ಲ್ ರಾಯಲ್ಸ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸುವ ಮೂಲಕ ಕಗಿಸೊ ರಬಾಡ ಭರ್ಜರಿ ದಾಖಲೆಯೊಂದನ್ನು ಸಹ ಬರೆದಿದ್ದಾರೆ.
Updated on: Jan 14, 2025 | 8:53 AM

ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿದ್ದು ವೇಗದ ಬೌಲರ್ ಕಗಿಸೊ ರಬಾಡ. ಅದು ಸಹ ಸತತ ಮೇಡನ್ ಓವರ್ಗಳನ್ನು ಎಸೆಯುವ ಮೂಲಕ ಎಂಬುದು ವಿಶೇಷ. SA20 ಲೀಗ್ನ 6ನೇ ಪಂದ್ಯದಲ್ಲಿ ಎಂಐ ಕೇಪ್ಟೌನ್ ಹಾಗೂ ಪಾರ್ಲ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ MI ಕೇಪ್ಟೌನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಕೇಪ್ಟೌನ್ ಪರ ಆರಂಭಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 43 ರನ್ ಬಾರಿಸಿದರೆ, ರೀಝ ಹೆಂಡ್ರಿಕ್ಸ್ 37 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಈ ಮೂಲಕ ಎಂಐ ಕೇಪ್ಟೌನ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾರ್ಲ್ ರಾಯಲ್ಸ್ ತಂಡಕ್ಕೆ ಕಗಿಸೊ ರಬಾಡ ಪವರ್ಪ್ಲೇನಲ್ಲೇ ಆಘಾತ ನೀಡಿದ್ದರು. 4ನೇ ಓವರ್ ಮೂಲಕ ಬೌಲಿಂಗ್ ಆರಂಭಿಸಿದ ರಬಾಡ ಯಾವುದೇ ರನ್ ನೀಡದೇ ಜೋ ರೂಟ್ ವಿಕೆಟ್ ಪಡೆದರು. ಇದಾದ ಬಳಿಕ ಪವರ್ಪ್ಲೇನ ಕೊನೆಯ ಓವರ್ ಎಸೆದ ರಬಾಡ ಮತ್ತೆ ಮೇಡನ್ ಮಾಡಿದ್ದಲ್ಲದೇ ಲುವಾನ್-ಡ್ರೆ ಪ್ರಿಟೋರಿಯಸ್ ವಿಕೆಟ್ ಕಬಳಿಸಿದರು.

ಅಂದರೆ ಕಗಿಸೊ ರಬಾಡ ಎಸೆದ 12 ಎಸೆತಗಳಲ್ಲೂ ರನ್ಗಳಿಸಲು ಪಾರ್ಲ್ ರಾಯಲ್ಸ್ ಬ್ಯಾಟರ್ಗಳಿಗೆ ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಪವರ್ಪ್ಲೇನಲ್ಲಿ ಎರಡು ಮೇಡನ್ ಓವರ್ಗಳನ್ನು ಎಸೆದ ಮೊದಲ ಬೌಲರ್ ಎನಿಸಿಕೊಂಡರು. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮೇಡನ್ ಓವರ್ಗಳನ್ನು ಎಸೆದ ಅಪರೂಪದ ದಾಖಲೆ ಪಟ್ಟಿಯಲ್ಲೂ ಸ್ಥಾನ ಪಡೆದರು.

ಇನ್ನು ರಬಾಡ ಅವರ ಈ ಕರಾರುವಾಕ್ ದಾಳಿಯ ಪರಿಣಾಮ ಪಾರ್ಲ್ ರಾಯಲ್ಸ್ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಅಂತಿಮವಾಗಿ ಪಾರ್ಲ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಈ ಮೂಲಕ ಎಂಐ ಕೇಪ್ಟೌನ್ ತಂಡವು 33 ರನ್ಗಳ ಭರ್ಜರಿ ಜಯ ಸಾಧಿಸಿದೆ.



















