ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. 2009ರಲ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ಮಾರ್ಟಿನ್ ಗಪ್ಟಿಲ್ ಕಳೆದ ಎರಡು ವರ್ಷಗಳಿಂದ ನ್ಯೂಜಿಲೆಂಡ್ ತಂಡದ ಭಾಗವಾಗಿರಲಿಲ್ಲ. ಇದೀಗ ಅವಕಾಶಗಳ ಕೊರತೆಯಿಂದಾಗಿ ಗಪ್ಟಿಲ್ ತಮ್ಮ 14 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆದಾಗ್ಯೂ, ಟಿ20 ಲೀಗ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಗಪ್ಟಿಲ್ ತಿಳಿಸಿದ್ದಾರೆ.
ಮಾರ್ಟಿನ್ ಗಪ್ಟಿಲ್ ನ್ಯೂಜಿಲೆಂಡ್ ಪರ ಎಲ್ಲಾ ಮೂರು ಮಾದರಿಗಳಲ್ಲಿ ಆಡಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ತಂಡದ ಪರ ಅನೇಕ ದೊಡ್ಡ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಮಾದರಿಯಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ಗಪ್ಟಿಲ್ ಏಕದಿನ ವಿಶ್ವಕಪ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆಯನ್ನೂ ಮಾಡಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪೈಕಿ ಗಪ್ಟಿಲ್ ಹೆಸರು ಸೇರಿದೆ. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಗುಪ್ಟಿಲ್ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಕಿವೀಸ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಏಕದಿನ ಮಾದರಿಯಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಗಪ್ಟಿಲ್.
ಇನ್ನು ತಮ್ಮ ನಿವೃತ್ತಿ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಮಾರ್ಟಿನ್ ಗಪ್ಟಿಲ್, 'ಬಾಲ್ಯದಿಂದಲೂ ನ್ಯೂಜಿಲೆಂಡ್ ಪರ ಆಡುವುದು ನನ್ನ ಕನಸಾಗಿತ್ತು ಮತ್ತು ನನ್ನ ದೇಶಕ್ಕಾಗಿ 367 ಪಂದ್ಯಗಳನ್ನು ಆಡಿದ್ದಕ್ಕಾಗಿ ನಾನು ನಂಬಲಾಗದಷ್ಟು ಅದೃಷ್ಟ ಮತ್ತು ಹೆಮ್ಮೆಪಡುತ್ತೇನೆ. ವೃತ್ತಿಜೀವನದಲ್ಲಿ ನನಗೆ ಬೆನ್ನೇಲುಬಾಗಿ ನಿಂತಿದ್ದ ನನ್ನ ಎಲ್ಲಾ ತಂಡದ ಸಹ ಆಟಗಾರರಿಗೆ ಮತ್ತು ಕೋಚಿಂಗ್ ಸಿಬ್ಬಂದಿಗೆ, ವಿಶೇಷವಾಗಿ 19 ವರ್ಷದೊಳಗಿನವರ ಮಟ್ಟದಿಂದ ನನಗೆ ತರಬೇತಿ ನೀಡಿದ ಮಾರ್ಕ್ ಒ'ಡೊನೆಲ್ ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇದೇ ಗಪ್ಟಿಲ್ ಅವರಿಂದ 2015 ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು, ಫೈನಲ್ ರೇಸ್ನಿಂದ ಹೊರಬಿದ್ದಿತ್ತು. ಗುಪ್ಟಿಲ್ ಅವರ ನಿಖರ ಥ್ರೋ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎಂಎಸ್ ಧೋನಿಗೆ ಪೆವಿಲಿಯನ್ ಹಾದಿಯನ್ನು ತೋರಿಸಿತ್ತು. ಇದರಿಂದಾಗಿ ಟೀಂ ಇಂಡಿಯಾದ ಕನಸು ಕೂಡ ಭಗ್ನಗೊಂಡಿತ್ತು.
ಮಾರ್ಟಿನ್ ಗಪ್ಟಿಲ್ ಅವರು ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ನ್ಯೂಜಿಲೆಂಡ್ ಪರ ಒಟ್ಟು 198 ಏಕದಿನ, 122 ಟಿ20 ಮತ್ತು 47 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 17 ಅರ್ಧ ಶತಕ ಮತ್ತು 3 ಶತಕಗಳ ಸಹಾಯದಿಂದ ಟೆಸ್ಟ್‌ನಲ್ಲಿ 2586 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಗುಪ್ಟಿಲ್ ಅದ್ಭುತ ಶತಕ ಬಾರಿಸಿದ್ದರು. ಈ ಮೂಲಕ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ನ್ಯೂಜಿಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.
ಹಾಗೆಯೇ ಏಕದಿನಲ್ಲಿ ಮಾರ್ಟಿನ್ ಗುಪ್ಟಿಲ್ 41.73 ರ ಸರಾಸರಿಯಲ್ಲಿ 7346 ರನ್ ಕಲೆಹಾಕಿದ್ದು, ಇದರಲ್ಲಿ ಅವರು 39 ಅರ್ಧ ಶತಕಗಳು ಮತ್ತು 18 ಶತಕಗಳನ್ನು ಬಾರಿಸಿದ್ದರು. ಇನ್ನು ಟಿ20 ಮಾದರಿಯಲ್ಲಿ 31.81 ರ ಸರಾಸರಿಯಲ್ಲಿ 3531 ರನ್ ಕಲೆಹಾಕಿರುವ ಗಪ್ಟಿಲ್ ಇದರಲ್ಲಿ 20 ಅರ್ಧಶತಕಗಳಲ್ಲದೆ 2 ಶತಕ ಕೂಡ ಬಾರಿಸಿದ್ದಾರೆ.
Published On - 7:31 pm, Wed, 8 January 25