IPL 2025: RCB ತಂಡಕ್ಕೆ JCB ಭಯ
IPL 2025 MI vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಮುಂಬೈ ಪರ ಜಸ್ಪ್ರೀತ್ (J), ಚಹರ್ (C), ಬೌಲ್ಟ್ (B) ಜೊತೆಯಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
Updated on: Apr 07, 2025 | 11:03 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ (ಏ.7) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಂಬೈ ಇಂಡಿಯನ್ಸ್ (MI) ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ತಂಡದ JCB ಜೊತೆಯಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಅಂದರೆ ಇದೇ ಮೊದಲ ಬಾರಿ ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಇತ್ತ ಈ ಮೂವರು ವೇಗಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಾಲಿಗೆ ಸವಾಲಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಕಿಂಗ್ ಕೊಹ್ಲಿ ಈ ಮೂವರ ವಿರುದ್ಧ ಈವರೆಗೆ 210 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 281 ರನ್ಗಳು ಮಾತ್ರ. ಇನ್ನು 7 ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ ಕಲೆಹಾಕಿರುವುದು 140 ರನ್ಗಳು ಮಾತ್ರ. ಇದರ ನಡುವೆ ಬುಮ್ರಾ 5 ಬಾರಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದಾರೆ.

ದೀಪಕ್ ಚಹರ್ ಐಪಿಎಲ್ನಲ್ಲಿ ಈವರೆಗೆ 85 ಪಂದ್ಯಗಳನ್ನಾಡಿದ್ದು ಈ ವೇಳೆ 81 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 63 ವಿಕೆಟ್ಗಳನ್ನು ಉರುಳಿಸಿದ್ದು ಪವರ್ಪ್ಲೇನಲ್ಲಿ ಎಂಬುದು ವಿಶೇಷ. ಹೀಗಾಗಿ ಮೊದಲ 6 ಓವರ್ಗಳಲ್ಲಿ ಚಹರ್ ಆರ್ಸಿಬಿ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದರೂ ಅಚ್ಚರಿಪಡಬೇಕಿಲ್ಲ.

ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿದೇಶಿ ಬೌಲರ್ ಎಂಬ ದಾಖಲೆ ಟ್ರೆಂಟ್ ಬೌಲ್ಟ್ ಹೆಸರಿನಲ್ಲಿದೆ. ಪವರ್ಪ್ಲೇನಲ್ಲಿ 107 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಬೌಲ್ಟ್ ಬರೋಬ್ಬರಿ 64 ವಿಕೆಟ್ಗಳನ್ನು ಉರುಳಿಸಿದ್ದಾರೆ.

ಇನ್ನು ಐಪಿಎಲ್ನಲ್ಲಿ ಪವರ್ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್ ಪ್ರದರ್ಶಿಸಿದ ದಾಖಲೆ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದೆ. ಬುಮ್ರಾ ಪವರ್ಪ್ಲೇನಲ್ಲಿ ಬರೋಬ್ಬರಿ 76 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ಪವರ್ಪ್ಲೇನಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೂವರು ಬೌಲರ್ಗಳು ಜೊತೆಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ RCBಗೆ JCB ಕಡೆಯಿಂದ ಗಂಡಾಂತರ ಎದುರಾದರೂ ಅಚ್ಚರಿಪಡಬೇಕಿಲ್ಲ.
























