Updated on:Nov 15, 2021 | 5:47 PM
ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಇಬ್ಬರು ಆಟಗಾರರು ಕೂಡ ಮೂರು ವಿಶ್ವಕಪ್ ಗೆದ್ದ ಅಪರೂಪದ ದಾಖಲೆ ಬರೆದುಕೊಂಡಿದ್ದಾರೆ.
ಹೌದು, ಟಿ20 ವಿಶ್ವಕಪ್ ಫೈನಲ್ನ ಗೆಲುವಿನ ರೂವಾರಿಗಳಾದ ಜೋಶ್ ಹ್ಯಾಝಲ್ವುಡ್ ಹಾಗೂ ಮಿಚೆಲ್ ಮಾರ್ಷ್ ಮೂರು ವಿಶ್ವಕಪ್ ಗೆದ್ದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಅಂಡರ್ 19, ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದ ಸಾಧನೆಯನ್ನು ಈ ಇಬ್ಬರು ಆಟಗಾರರು ಮಾಡಿದ್ದಾರೆ.
2015ರಲ್ಲಿ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಗೆದ್ದಾಗ ಮಾರ್ಷ್ ಹಾಗೂ ಹ್ಯಾಝಲ್ವುಡ್ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಅದಕ್ಕೂ ಮುನ್ನ 2010 ಅಂಡರ್ 19 ವಿಶ್ವಕಪ್ ಗೆದ್ದ ಆಸೀಸ್ ತಂಡದಲ್ಲಿ ಈ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದರು. ಇದೀಗ 2021ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಮೂರು ವಿಶ್ವಕಪ್ ಗೆದ್ದ ಆಟಗಾರರು ಎನಿಸಿಕೊಂಡಿದ್ದಾರೆ.
ಈ ಹಿಂದೆ ಇಂತಹದೊಂದು ಸಾಧನೆ ಮಾಡಿದ್ದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಎಂಬುದು ವಿಶೇಷ. ಯುವಿ 2000ರ ಅಂಡರ್ 19 ವಿಶ್ವಕಪ್, 2007 ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆದ್ದ ವಿಶ್ವದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಇದೀಗ ಯುವರಾಜ್ ಸಿಂಗ್ ವಿಶ್ವ ದಾಖಲೆಯನ್ನು ಜೋಶ್ ಹ್ಯಾಝಲ್ವುಡ್ ಹಾಗೂ ಮಿಚೆಲ್ ಮಾರ್ಷ್ ಸರಿಗಟ್ಟಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೋಶ್ ಹ್ಯಾಝಲ್ವುಡ್ ಹಾಗೂ ಮಿಚೆಲ್ ಮಾರ್ಷ್
Published On - 4:41 pm, Mon, 15 November 21