ಖೈದಿ ಸಂಖ್ಯೆ 804 ಕ್ಕೆ ಬೆಂಬಲ: ಪಾಕಿಸ್ತಾನ್ ಆಟಗಾರನಿಗೆ ಬಿತ್ತು 14 ಲಕ್ಷ ರೂ. ದಂಡ..!
Aamir Jamal: ಆಮಿರ್ ಜಮಾಲ್ ಪಾಕಿಸ್ತಾನ್ ಪರ 8 ಟೆಸ್ಟ್, 3 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 26 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಮೂಲಕ 445 ರನ್ ಕಲೆಹಾಕಿದ್ದಾರೆ. ಇದೇ ಆಮಿರ್ ಜಮಾಲ್ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಅದು ಸಹ 14 ಲಕ್ಷ ರೂ. ದಂಡ ಕಟ್ಟಿಸುವ ಮೂಲಕ ಎಂಬುದು ವಿಶೇಷ.
Updated on: Mar 16, 2025 | 1:54 PM

ಪಾಕಿಸ್ತಾನ್ ತಂಡದ ವೇಗಿ ಆಮಿರ್ ಜಮಾಲ್ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಹೀಗೆ ಸುದ್ದಿಯಾಗಿದ್ದು ತನ್ನ ಆಟದಿಂದಲ್ಲ. ಬದಲಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ವಿಧಿಸಿರುವ ದಂಡದಿಂದಾಗಿ ಎಂಬುದು ವಿಶೇಷ. ಹೌದು, ಆಮಿರ್ ಜಮಾಲ್ಗೆ ಪಿಸಿಬಿ 14 ಲಕ್ಷ ರೂ. (PKR) ದಂಡ ವಿಧಿಸಿದೆ.

ಇಂತಹದೊಂದು ದಂಡ ವಿಧಿಸಲು ಮುಖ್ಯ ಕಾರಣ ಆಮಿರ್ ಜಮಾಲ್ ತನ್ನ ಹ್ಯಾಟ್ ಮೇಲೆ ಖೈದಿ ನಂಬರ್ ಅನ್ನು ಬರೆದುಕೊಂಡಿದ್ದು. 2024 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಆಮಿರ್ ಜಮಾಲ್ ‘804’ ಎಂದು ಬರೆದಿರುವ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಪಾಕಿಸ್ತಾನ್ ತಂಡದ ಮಾಜಿ ನಾಯಕ/ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಆಮಿರ್ ಜಮಾಲ್ ತನ್ನ ಕ್ಯಾಪ್ ಮೇಲೆ 804 ಬರೆದುಕೊಂಡಿದ್ದರು. ಇದು ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಖೈದಿ ಸಂಖ್ಯೆ. ಇದನ್ನೇ ತನ್ನ ಹ್ಯಾಟ್ ಮೇಲೆ ಬರೆದು ಆಮಿಲ್ ಜಮಾಲ್ ಇಮ್ರಾನ್ ಖಾನ್ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ಆಮಿರ್ ಜಮಾಲ್ ಅವರ ನಡೆಯನ್ನು ಅಶಿಸ್ತು ಎಂದು ಪರಿಗಣಿಸಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ, ಅವರಿಗೆ 14 ಲಕ್ಷ ರೂ. ದಂಡ ವಿಧಿಸಿದೆ. ಆಮಿರ್ಗೆ ಅಲ್ಲದೆ ಪಾಕಿಸ್ತಾನ್ ತಂಡದ ನಿಯಮಗಳನ್ನು ಉಲ್ಲಂಘಿಸಿರುವ ಇನ್ನೂ ಕೆಲ ಆಟಗಾರರಿಗೂ ದಂಡದ ಬಿಸಿ ಮುಟ್ಟಿಸಿದ್ದಾರೆ.

ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ತಡರಾತ್ರಿ ಹೋಟೆಲ್‌ಗೆ ಆಗಮಿಸಿದ ಸೈಮ್ ಅಯ್ಯೂಬ್, ಸಲ್ಮಾನ್ ಅಲಿ ಅಘಾ ಹಾಗೂ ಅಬ್ದುಲ್ಲಾ ಶಫೀಕ್ ಅವರಿಗೆ ತಲಾ 5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇಂತಹ ದಂಡದಿಂದಲೇ ಇದೀಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಟಗಾರರಿಂದ ಒಟ್ಟು 33 ಲಕ್ಷ ರೂ. ವಸೂಲಿ ಮಾಡಿದೆ.



















