- Kannada News Photo gallery Cricket photos Rahul Dravid to choose from Rohit Sharma, KL Rahul & Rishabh Pant as India’s next Test captain
Rahul Dravid: ಟೆಸ್ಟ್ ತಂಡಕ್ಕೆ ಹೊಸ ನಾಯಕ: ರಾಹುಲ್ ದ್ರಾವಿಡ್ ಮುಂದಿದೆ 3 ಆಯ್ಕೆ
Team India Test Captain: ಈ ಹಿಂದೆ ಏಕದಿನ ಹಾಗೂ ಟಿ20 ತಂಡಗಳಿಗೆ ನಾಯಕನ ಆಯ್ಕೆ ವೇಳೆ ಕೂಡ ದ್ರಾವಿಡ್ ಅವರಿಗೆ ಬಿಸಿಸಿಐ ನಾಯಕನ ಆಯ್ಕೆಗಳನ್ನು ನೀಡಿತ್ತು. ಈ ವೇಳೆ ದ್ರಾವಿಡ್ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.
Updated on: Jan 16, 2022 | 3:34 PM

ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂದಿನ ನಾಯಕ ಯಾರು ಎಂಬ ಚರ್ಚೆಗಳು ಶುರುವಾಗಿದೆ. ಇತ್ತ ಹೊಸ ನಾಯರುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಹೆಸರುಗಳು ಕೇಳಿ ಬರುತ್ತಿವೆ.

ಇದಾಗ್ಯೂ ಬಿಸಿಸಿಐ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಮುಂದೆ ಮೂರು ಆಯ್ಕೆಗಳನ್ನು ನೀಡಿದೆ ಎಂದು ವರದಿಯಾಗಿದೆ. ಈ ಹಿಂದೆ ಏಕದಿನ ಹಾಗೂ ಟಿ20 ತಂಡಗಳಿಗೆ ನಾಯಕನ ಆಯ್ಕೆ ವೇಳೆ ಕೂಡ ದ್ರಾವಿಡ್ ಅವರಿಗೆ ಬಿಸಿಸಿಐ ನಾಯಕನ ಆಯ್ಕೆಗಳನ್ನು ನೀಡಿತ್ತು. ಈ ವೇಳೆ ದ್ರಾವಿಡ್ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಇಬ್ಬರಲ್ಲಿ ಒಬ್ಬರು ನಾಯಕರಾದರೆ ಉತ್ತಮ ಎಂದಿದ್ದರು. ಅದರಂತೆ ಬಿಸಿಸಿಐ ರೋಹಿತ್ ಶರ್ಮಾರನ್ನು ನಾಯಕ ಹಾಗೂ ಕೆಎಲ್ ರಾಹುಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿತ್ತು.

ಇದೀಗ ಬಿಸಿಸಿಐ ಮುಂದಿಟ್ಟಿರುವ ಮೂರು ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಹೆಸರುಗಳಿದೆ. ಇದರ ಜೊತೆಗೆ ಹೊಸ ಸೇರ್ಪಡೆ ರಿಷಭ್ ಪಂತ್ ಹೆಸರು ಎಂಬುದು ವಿಶೇಷ. ಅಂದರೆ ಇಲ್ಲಿ ಬಿಸಿಸಿಐ ದೀರ್ಘಾವಧಿಗೆ ನಾಯಕನ ಆಯ್ಕೆಗೆ ಮುಂದಾಗಿರುವುದು ಸ್ಪಷ್ಟ. ಈ ಮೂವರು ಹೆಸರುಗಳ್ಯಾಕೆ ಮುಂಚೂಣಿಯಲ್ಲಿ?

ರೋಹಿತ್ ಶರ್ಮಾ: ಟೀಮ್ ಇಂಡಿಯಾ ಏಕದಿನ ಹಾಗೂ ಟಿ20 ತಂಡದ ನಾಯಕರಾಗಿರುವ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ನಾಯಕತ್ವ ನೀಡಿದರೆ ಕೋಚ್ ಹಾಗೂ ನಾಯಕನ ನಡುವೆ ಹೆಚ್ಚಿನ ಹೊಂದಾಣಿಕೆ ಇರುತ್ತದೆ. ಇದರಿಂದ ಟೆಸ್ಟ್ ಸರಣಿಯ ವೇಳೆ ಹೊಸ ನಾಯಕನೊಂದಿಗೆ ಚರ್ಚೆಗಳ ಅವಶ್ಯಕತೆಯಿರುವುದಿಲ್ಲ. ಅಷ್ಟೇ ಅಲ್ಲದೆ ಟೆಸ್ಟ್ಗಿಂತ ಟಿ20 ಹಾಗೂ ಏಕದಿನ ಪಂದ್ಯಗಳನ್ನು ಹೆಚ್ಚಾಗಿ ಆಡುವುದರಿಂದ ನಾಯಕ-ಕೋಚ್ ನಡುವೆ ಉತ್ತಮ ಹೊಂದಾಣಿಕೆ ಸೃಷ್ಟಿಯಾಗಿರುತ್ತದೆ. ಹೀಗಾಗಿ ಟೆಸ್ಟ್ನಲ್ಲೂ ಅದೇ ನಾಯಕನನ್ನು ಆಯ್ಕೆ ಮಾಡಿದರೆ ತಂಡದ ಸಮತೋಲನಕ್ಕೂ ಹೆಚ್ಚಿನ ಅನುಕೂಲವಾಗಲಿದೆ.

ಕೆಎಲ್ ರಾಹುಲ್: ಈ ಪಟ್ಟಿಯಲ್ಲಿ ರಾಹುಲ್ ಹೆಸರು ಮುಂಚೂಣಿಗೆ ಬರಲು ಒಂದು ಕಾರಣ, ಭವಿಷ್ಯದ ನಾಯಕ. ಏಕೆಂದರೆ ರೋಹಿತ್ ಶರ್ಮಾಗೆ ಇನ್ನು ಮೂರು ತಿಂಗಳಲಲ್ಲಿ 35 ವರ್ಷಗಳಾಗಲಿವೆ. ಅಂದರೆ ಇನ್ನೊಂದು ವರ್ಷ ಮಾತ್ರ ಅವರು ಟೀಮ್ ಇಂಡಿಯಾ ಪರ ಆಡಬಹುದು. ಇದೀಗ ಹಿಟ್ಮ್ಯಾನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದರೆ ಒಂದು ವರ್ಷದೊಳಗೆ ಮತ್ತೆ ನಾಯಕನನ್ನು ನಾಯಕ ಮಾಡಬೇಕಾಗುತ್ತದೆ. ಆದರೆ 29 ವರ್ಷದ ರಾಹುಲ್ ಅವರನ್ನು ಆಯ್ಕೆ ಮಾಡಿದರೆ ದೀರ್ಘಾವಧಿವರೆಗೂ ತಂಡಕ್ಕೆ ಸಾರಥಿ ಸಿಕ್ಕಂತಾಗುತ್ತದೆ. ಅಷ್ಟೇ ಅಲ್ಲದೆ ರಾಹುಲ್ ಟೆಸ್ಟ್ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕೂಡ ನೀಡುತ್ತಿದ್ದಾರೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಕೆಎಲ್ ರಾಹುಲ್ ಹೆಸರು ಕೂಡ ಮುಂಚೂಣಿಯಲ್ಲಿದೆ.

ರಿಷಭ್ ಪಂತ್: ಅತ್ತ ಟೀಮ್ ಇಂಡಿಯಾ ಏಕದಿನ-ಟಿ20 ತಂಡಗಳ ಉಪನಾಯಕನಾಗಿ ಕೆಎಲ್ ರಾಹುಲ್ ಇದ್ದಾರೆ. ಆದರೆ ಎರಡು ವರ್ಷಗಳ ಒಳಗೆ ಹಿಟ್ಮ್ಯಾನ್ ಕೂಡ ನಿವೃತ್ತಿ ಘೋಷಿಸಬಹುದು. ಅತ್ತ ಕೆಎಲ್ ರಾಹುಲ್ ಅವರನ್ನು ಮಾತ್ರ ಭವಿಷ್ಯದ ನಾಯಕ ಎಂದು ರೂಪಿಸಿದರೆ, ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಮತ್ತೋರ್ವ ನಾಯಕನನ್ನು ಕೂಡ ಬಿಸಿಸಿಐ ಈಗಲೇ ಸಜ್ಜುಗೊಳಿಸಬೇಕಿದೆ. ಅದರಲ್ಲೂ ಈಗಾಗಲೇ ಐಪಿಎಲ್ನಲ್ಲಿ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸಿರುವ ರಿಷಭ್ ಪಂತ್ ಕೂಡ ಭವಿಷ್ಯದ ಟೀಮ್ ಇಂಡಿಯಾ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಬಳಿಕ ಮತ್ತೊಮ್ಮೆ ವಿಕೆಟ್ ಕೀಪರ್ಗೆ ನಾಯಕನ ಜವಾಬ್ದಾರಿ ನೀಡಿ ಪರೀಕ್ಷಿಸುವ ಸಾಧ್ಯತೆಯಿದೆ. ಹೀಗಾಗಿ 24 ವರ್ಷದ ರಿಷಭ್ ಪಂತ್ ಅವರನ್ನು ಕೂಡ ನಾಯಕರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಮೂವರಲ್ಲಿ ಯಾರಿಗೆ ದ್ರಾವಿಡ್ ಮಣೆ ಹಾಕಲಿದ್ದಾರೆ ಕಾದು ನೋಡಬೇಕಿದೆ.









