ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB
IPL 2026 RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡವು ಮುಂದಿನ ಸೀಸನ್ನಲ್ಲಿ ಹೊಸ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ತವರು ಮೈದಾನವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ.
Updated on: Jan 14, 2026 | 7:30 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಎರಡು ಉತ್ತರಗಳು ಕೇಳಿ ಬರುತ್ತಿದೆ. ಅದು ಕೂಡ ನವಿ ಮುಂಬೈ ಮತ್ತು ರಾಯ್ಪುರ್ ಕಡೆಯಿಂದ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂದಿನ ಸೀಸನ್ ಗಾಗಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ RCB ಕಣಕ್ಕಿಳಿಯುವುದು ಡೌಟ್.

2025ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ RCB ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಏರ್ಪಡಿಸಿತ್ತು. ಈ ವೇಳೆ ಉಂಟಾದ ಕಾಲ್ತುತಿದಿಂದಾಗಿ 11 ಮಂದಿ ಮೃತಪಟ್ಟಿದ್ದರು. ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.

ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಮೂಲಸೌಕರ್ಯಗಳ ಕೊರತೆ ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಇದೇ ಕಾರಣದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಗಳಿಗೂ ಎನ್ಒಸಿ ಸಿಗುವುದು ಅನುಮಾನ ಎನ್ನಲಾಗಿದೆ.

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನವಿ ಮುಂಬೈ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ಹೊಸ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಅಲ್ಲದೆ ಈ ಸ್ಟೇಡಿಯಂನಲ್ಲಿ ಒಟ್ಟು 5 ಮ್ಯಾಚ್ ಗಳನ್ನು ಆಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಇನ್ನುಳಿದ 2 ಹೋಮ್ ಮ್ಯಾಚ್ ಗಳನ್ನು ಚಂಡೀಗಢದ ರಾಯ್ಪುರ್ನಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಆಡಲು ಪ್ಲ್ಯಾನ್ ರೂಪಿಸಲಾಗಿದೆ. ಅಂದರೆ ಈ ಬಾರಿ RCB ತನ್ನ ಹೋಮ್ ಮ್ಯಾಚ್ ಗಳನ್ನು ನವಿ ಮುಂಬೈ ಮತ್ತು ರಾಯ್ಪುರ್ ನಲ್ಲಿ ಆಡುವುದು ಬಹುತೇಕ ಖಚಿತ. ಅದಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂ ಮೇಲಿನ ನಿಷೇಧ ತೆರವಾದರೆ ಮಾತ್ರ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ.
