
ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡದ ಪರ ನಡೆಯಲಿರುವ ಮೂರನೇ ಹಾಗೂ ಕೊನೆಯ ಅನಧಿಕೃತ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಈ ಪಂದ್ಯದಲ್ಲಿ ಆಡಿಸದಿರಲು ನಿರ್ಧರಿಸಲಾಗಿದೆ. ಪಂತ್ ಅಲಭ್ಯರಾಗಿರುವುದರಿಂದ ನವೆಂಬರ್ 19ರಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರ ಲಭ್ಯತೆಯ ಬಗ್ಗೆಯೂ ಅನುಮಾನ ಮೂಡಿದೆ(PC-PTI).
ಇರಾನಿ ಕಪ್ ಟೂರ್ನಿಯ ವೇಳೆ ರಿಷಭ್ ಪಂತ್ ಸೈಡ್ ಸ್ಟ್ರೇನ್ ಸಮಸ್ಯೆಗೆ ತುತ್ತಾಗಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡದ ಪರ ನಡೆಯಬೇಕಿದ್ದ ಮೊದಲ ಎರಡು ಪಂದ್ಯಗಳಿಂದಲೂ ಅವರು ಹೊರಗುಳಿದಿದ್ದರು. ಇದೀಗ ನವೆಂಬರ್ 7ರಿಂದ ಆರಂಭವಾಗಲಿರುವ ಮೂರನೇ ಪಂದ್ಯದಲ್ಲೂ ಆಡಲು ಸಾಧ್ಯವಾಗುತ್ತಿಲ್ಲ(PC-PTI).
ಬಿಸಿಸಿಐನ ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದ್ದು, ‘ಮುನ್ನೆಚ್ಚರಿಕೆ ಕ್ರಮವಾಗಿ ನ್ಯೂಜಿಲೆಂಡ್ ಎ ವಿರುದ್ಧದ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಿಂದ ರಿಷಭ್ ಪಂತ್ ಅವರನ್ನು ಹೊರಗಿಡಲಾಗಿದೆ. ಆದರೆ, ಪಂತ್ ಈಗಾಗಲೇ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ನೋವಿನ ಸಮಸ್ಯೆಯೂ ಇಲ್ಲ. ಆದರೂ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಲ್ಲ’ ಎಂದು ತಿಳಿಸಿದೆ(PC-PTI).
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಪಂದ್ಯ ನವೆಂಬರ್ 19ರಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ಸದ್ಯ ರಿಷಭ್ ಪಂತ್ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ತಂಡಗಳಲ್ಲಿ ಅವರು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ(PC-PTI).
ಹೀಗಾಗಿ ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಪಂತ್ ಸಂಪೂರ್ಣ ಫಿಟ್ ಆಗಿರುವುದು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಆದರೆ, ಅವರು ಯಾವಾಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂಬ ಬಗ್ಗೆ ಬಿಸಿಸಿಐನಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ(PC-PTI).