181 ವರ್ಷಗಳ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ ಬರೆದ ಪಾಕ್ ಆಟಗಾರ
World Record: ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿದ್ದು 1844 ರಲ್ಲಿ. ಮೊದಲ ಮ್ಯಾಚ್ನಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಿದ್ದವು. ಇದಾದ ಬಳಿಕ ಹಲವು ತಂಡಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಹಲವು ದೇಶಗಳ ಆಟಗಾರರು ಇಂಟರ್ನ್ಯಾಷನಲ್ ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದಾರೆ. ಇವರಲ್ಲಿ ಒಂದೇ ವರ್ಷ ಅತೀ ಹೆಚ್ಚು ಮ್ಯಾಚ್ ಆಡಿರುವುದು ಪಾಕ್ ಆಟಗಾರ ಎಂಬುದು ವಿಶೇಷ.
Updated on: Nov 26, 2025 | 7:54 AM

ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿ ಬರೋಬ್ಬರಿ 181 ವರ್ಷಗಳಾಗಿವೆ. ಈ 181 ವರ್ಷಗಳಲ್ಲಿ ಒಂದೇ ವರ್ಷ ಅತ್ಯಧಿಕ ಇಂಟರ್ನ್ಯಾಷನಲ್ ಮ್ಯಾಚ್ಗಳನ್ನು ಆಡಿದ ವಿಶ್ವ ದಾಖಲೆ ಇದೀಗ ಪಾಕಿಸ್ತಾನ್ ತಂಡದ ಆಟಗಾರ ಸಲ್ಮಾನ್ ಅಲಿ ಅಘಾ (Salman Ali Agha) ಹೆಸರಿಗೆ ಸೇರ್ಪಡೆಯಾಗಿದೆ.

ಝಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳ ವಿರುದ್ಧದ ತ್ರಿಕೋನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳನ್ನಾಡುವ ಮೂಲಕ ಸಲ್ಮಾನ್ ಅಲಿ ಅಘಾ ಒಂದೇ ವರ್ಷದಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ರಾಹುಲ್ ದ್ರಾವಿಡ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ 1999 ರಲ್ಲಿ ಬರೋಬ್ಬರಿ 53 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. ಈ ಮೂಲಕ ಒಂದೇ ವರ್ಷ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

ಇದಾದ ಬಳಿಕ 2000 ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಸರಿಗಟ್ಟಿದ್ದರು. 2000 ರಲ್ಲಿ ಯೂಸುಫ್ 53 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆ ಬಳಿಕ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡ 53 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಮೂಲಕ ಈ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದರು.

ಇದೀಗ ಸಲ್ಮಾನ್ ಅಲಿ ಅಘಾ ಈ ದಾಖಲೆಗಳನ್ನು ಅಳಿಸಿ ಹಾಕಿ ಮುನ್ನುಗ್ಗಿದ್ದಾರೆ. 2025 ರಲ್ಲಿ ಸಲ್ಮಾನ್ ಅಲಿ ಅಘಾ ಬರೋಬ್ಬರಿ 54 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ 181 ವರ್ಷಗಳ ಇಂಟರ್ನ್ಯಾಷನಲ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತೀ ಹೆಚ್ಚು ಮ್ಯಾಚ್ಗಳನ್ನಾಡಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
