- Kannada News Photo gallery Cricket photos Shahrukh khan blasts 79 runs of 39 balls Tamil Nadu vs Karnataka Vijay Hazare Trophy 2021
Vijay Hazare Trophy 2021: 6,6,6,6,6,6: ಶಾರೂಖ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್
Shahrukh khan Vijay Hazare Trophy 2021: ನಿರ್ಣಾಯಕ ಪಂದ್ಯದಲ್ಲಿ ಶಾರೂಖ್ ಖಾನ್ ಕರ್ನಾಟಕ ಪಾಲಿಗೆ ಕಂಟಕವಾಗಿದ್ದಾರೆ. ಕಳೆದ ಬಾರಿ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಾರೂಖ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Updated on:Dec 21, 2021 | 3:18 PM

ವಿಜಯ್ ಹಜಾರೆ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ವಿರುದ್ದ ತಮಿಳುನಾಡು ಬ್ಯಾಟರ್ ಶಾರೂಖ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭಿಕ ಜಗದೀಸನ್ ಅವರ ಶತಕ ಹಾಗೂ ಸಾಯಿ ಕಿಶೋರ್ ಅವರ ಅರ್ಧಶತಕದೊಂದಿಗೆ ತಮಿಳುನಾಡು ಉತ್ತಮ ಆರಂಭ ಪಡೆದಿತ್ತು. ಅದರಂತೆ 45 ಓವರ್ ವೇಳೆ 290 ರ ಗಡಿ ತಲುಪಿದ್ದ ತಮಿಳುನಾಡು ಮೊತ್ತವನ್ನು 350 ರ ಗಡಿದಾಟಿಸಿದ್ದು ಶಾರೂಖ್ ಖಾನ್.

ಕರ್ನಾಟಕ ಬೌಲರುಗಳ ಮುಂದೆ ಪರಾಕ್ರಮ ಮೆರೆದ ಶಾರೂಖ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. 202 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಶಾರೂಖ್ ಬರೋಬ್ಬರಿ 6 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಯುವ ದಾಂಡಿಗನ ಬ್ಯಾಟ್‌ನಿಂದ 7 ಫೋರ್ಗಳು ಕೂಡ ಮೂಡಿ ಬಂದಿತ್ತು. 44ನೇ ಓವರ್ ವೇಳೆ 14 ಎಸೆತಗಳಲ್ಲಿ 17 ರನ್ ಗಳಿಸಿದ್ದ ಶಾರೂಖ್ ಆ ಬಳಿಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು ವಿಶೇಷ. ಈ ಮೂಲಕ ತಮಿಳುನಾಡು ಕೊನೆಯ 24 ಎಸೆತಗಳಲ್ಲಿ 64 ರನ್ ಗಳಿಸಿತು. ಈ 64 ರನ್ಗಳ ಪೈಕಿ 59 ರನ್‌ಗಳು ಶಾರುಖ್ ಖಾನ್ ಅವರ ಬ್ಯಾಟ್‌ನಿಂದ ಮೂಡಿಬಂದಿದ್ದವು.

ಅದರಂತೆ ಕೇವಲ 39 ಎಸೆತಗಳಲ್ಲಿ 79 ರನ್ ಸಿಡಿಸುವ ಮೂಲಕ 300ರ ಅಸುಪಾಸಿನಲ್ಲಿರಬೇಕಾದ ಸ್ಕೋರ್ ಅನ್ನು ಅಂತಿಮ ಓವರ್ಗಳ ವೇಳೆಗೆ ಶಾರೂಖ್ ಖಾನ್ 350 ರ ಗಡಿದಾಟಿಸಿದರು. ಶಾರೂಖ್ರ ಅಜೇಯ 79 ರನ್ಗಳ ನೆರವಿನಿಂದ ತಮಿಳುನಾಡು ತಂಡವು ಕರ್ನಾಟಕ ವಿರುದ್ದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿತು.

ಈ ಹಿಂದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲೂ ಕರ್ನಾಟಕ ಪಾಲಿಗೆ ಶಾರೂಖ್ ಖಾನ್ ಮುಳುವಾಗಿದ್ದರು. ಅಂದು ಕೇವಲ 15 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಶಾರೂಖ್ ಖಾನ್ ತಮಿಳುನಾಡು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಅದು ಕೂಡ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಎಂಬುದು ವಿಶೇಷ.

ಇದೀಗ ಮತ್ತೊಮ್ಮೆ ನಿರ್ಣಾಯಕ ಪಂದ್ಯದಲ್ಲಿ ಶಾರೂಖ್ ಖಾನ್ ಕರ್ನಾಟಕ ಪಾಲಿಗೆ ಕಂಟಕವಾಗಿದ್ದಾರೆ. ಕಳೆದ ಬಾರಿ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಾರೂಖ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟೂರ್ನಿಗಳ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿರುವ ಶಾರೂಖ್ ಖರೀದಿಗೆ ಈ ಬಾರಿ ಪೈಪೋಟಿಯಂತು ಕಂಡು ಬರಲಿದೆ.

Shahrukh khan blasts 79 runs of 39 balls Tamil Nadu vs Karnataka Vijay Hazare Trophy 2021
Published On - 3:15 pm, Tue, 21 December 21



















