- TV9 Kannada Photo gallery Cricket photos Smriti Mandhana T20 WC Brilliance: Breaks 3 Records, Leads India to Victory
ಒಂದಲ್ಲ, ಎರಡಲ್ಲ, ಮೂರು ದಾಖಲೆಗಳನ್ನು ನಿರ್ಮಿಸಿದ ಸ್ಮೃತಿ ಮಂಧಾನ
Smriti Mandhana's T20 World Cup Heroics: ಸ್ಮೃತಿ ಮಂಧಾನ 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 74 ರನ್ ಸಿಡಿಸಿ ಮೂರು ಮಹತ್ವದ ದಾಖಲೆಗಳನ್ನು ನಿರ್ಮಿಸಿದರು. 600 T20I ಬೌಂಡರಿಗಳನ್ನು ಬಾರಿಸಿದ ಮತ್ತು ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್ ಬಾರಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.ಹಾಗೆಯೇ ಶಫಾಲಿ ವರ್ಮಾ ಜೊತೆ 3500+ ರನ್‌ಗಳ ದಾಖಲೆ ಜೊತೆಯಾಟದ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
Updated on: Jun 18, 2026 | 9:35 PM

2026 ರ ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ, ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು (PC-PTI).

ಅದರಲ್ಲೂ ನೆದರ್ಲ್ಯಾಂಡ್ಸ್ ವಿರುದ್ಧ 74 ರನ್‌ಗಳ ಇನ್ನಿಂಗ್ಸ್ ಆಡಿದರು. ತಮ್ಮ ಈ ಇನ್ನಿಂಗ್ಸ್ನಲ್ಲಿ 36 ಎಸೆತಗಳನ್ನು ಎದುರಿಸಿದ ಸ್ಮೃತಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಈ ಇನ್ನಿಂಗ್ಸ್ ಮೂಲಕ ಮಂಧಾನ ಮೂರು ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು (PC-PTI).

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 11 ಬೌಂಡರಿಗಳನ್ನು ಬಾರಿಸುವ ಮೂಲಕ ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 600 ಬೌಂಡರಿಗಳನ್ನು ಬಾರಿಸಿದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಪುರುಷ ಅಥವಾ ಮಹಿಳಾ ಕ್ರಿಕೆಟ್‌ನಲ್ಲಿ ಯಾವುದೇ ಪ್ಲೇಯರ್ 600 ಬೌಂಡರಿಗಳನ್ನು ಬಾರಿಸಿಲ್ಲ. ಮಂಧಾನ ಒಟ್ಟು 603 ಬೌಂಡರಿಗಳನ್ನು ಬಾರಿಸಿದ್ದಾರೆ (PC-BCCI).

ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮಂಧಾನ ತಮ್ಮ ಆರನೇ ಐವತ್ತು ಪ್ಲಸ್ ಸ್ಕೋರ್ ಗಳಿಸುವ ಮೂಲಕ ಹರ್ಮನ್‌ಪ್ರೀತ್ ಕೌರ್ ಅವರನ್ನು ಹಿಂದಿಕ್ಕಿದರು (PC-BCCI).

ಹಾಗೆಯೇ ಈ ಪಂದ್ಯದಲ್ಲಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್ಗೆ 115 ರನ್‌ಗಳ ಜೊತೆಯಾಟ ನಡೆಸಿದರು. ಈ ಮೂಲಕ ಈ ಜೋಡಿ ಹೆಸರಲ್ಲಿ ಇನ್ನೊಂದು ದಾಖಲೆಯನ್ನು ನಿರ್ಮಿಸಿತು. ಶಫಾಲಿ ಮತ್ತು ಮಂಧಾನ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,500 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹೊಂದಿರುವ ಮೊದಲ ಜೋಡಿ ಎನಿಸಿಕೊಂಡಿದೆ. ಶಫಾಲಿ ವರ್ಮಾ ಕೂಡ ನೆದರ್ಲ್ಯಾಂಡ್ಸ್ ವಿರುದ್ಧ 55 ರನ್‌ಗಳ ಇನ್ನಿಂಗ್ಸ್ ಆಡಿದರು (PC-BCCI).




