ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೇನ್
T20I World Record: ಟಿ20 ಕ್ರಿಕೆಟ್ನ ವಿಶ್ವ ದಾಖಲೆ ಪಟ್ಟಿಗೆ ಸ್ಪೇನ್ ಕೂಡ ಎಂಟ್ರಿ ಕೊಟ್ಟಿದೆ. ಅದು ಸಹ ಸತತ ಗೆಲುವುಗಳ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ಹೊಸ ವಿಶ್ವ ದಾಖಲೆಯನ್ನು ಸ್ಪೇನ್ ತಂಡ ನಿರ್ಮಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ಸ್ಪೇನ್ ಪಡೆ ಯಶಸ್ವಿಯಾಗಿದೆ.
Updated on: Aug 27, 2024 | 7:24 AM

ಐಸಿಸಿ ಟಿ20 ವಿಶ್ವಕಪ್ನ ಯುರೋಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಗ್ರೀಸ್ ವಿರುದ್ಧ ಸ್ಪೇನ್ ತಂಡವು ಭರ್ಜರಿ ಜಯ ಸಾಧಿಸಿದೆ. ಗುರ್ನಸಿ ರೋವರ್ಸ್ ಅಥ್ಲೆಟಿಕ್ ಕ್ಲಬ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗ್ರೀಸ್ ತಂಡವು 20 ಓವರ್ಗಳಲ್ಲಿ 96 ರನ್ಗಳಿಸಿತು. ಈ ಗುರಿಯನ್ನು 13 ಓವರ್ಗಳಲ್ಲಿ ಬೆನ್ನತ್ತುವ ಮೂಲಕ ಸ್ಪೇನ್ ತಂಡವು 7 ವಿಕೆಟ್ಗಳ ಗೆಲುವು ದಾಖಲಿಸಿದೆ.

ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಸ್ಪೇನ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಮಲೇಷ್ಯಾ ಹಾಗೂ ಬರ್ಮುಡಾ ತಂಡಗಳ ಹೆಸರಿನಲ್ಲಿತ್ತು.

ಮಲೇಷ್ಯಾ ತಂಡವು ಸತತ 13 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇನ್ನು ಬರ್ಮುಡಾ ಕೂಡ ಸತತ 13 ಪಂದ್ಯಗಳ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಈ ಎರಡು ತಂಡಗಳ ವಿಶ್ವ ದಾಖಲೆ ಮುರಿಯುವಲ್ಲಿ ಸ್ಪೇನ್ ತಂಡ ಯಶಸ್ವಿಯಾಗಿದೆ.

ಗ್ರೀಸ್ ತಂಡವನ್ನು ಬಗ್ಗು ಬಡಿಯುವುದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಸ್ಪೇನ್ ಪಾಲಾಗಿದೆ. ಸ್ಪೇನ್ ತಂಡವು ಈವರೆಗೆ ಸತತವಾಗಿ 14 ಟಿ20 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಈ ಗೆಲುವಿನ ನಾಗಾಲೋಟದೊಂದಿಗೆ ಇದೀಗ ಟಿ20 ಕ್ರಿಕೆಟ್ನಲ್ಲಿ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ.

ಇನ್ನು ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಸತತವಾಗಿ 12 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸತತ ಗೆಲುವಿನ ದಾಖಲೆ ಪಟ್ಟಿಯಲ್ಲಿ ಭಾರತ ತಂಡವು 5ನೇ ಸ್ಥಾನದಲ್ಲಿರುವುದು ವಿಶೇಷ. ಒಟ್ಟಿನಲ್ಲಿ ವಿಶ್ವ ಕ್ರಿಕೆಟ್ಗೆ ಅಂಬೆಗಾಲಿಡುತ್ತಿರುವ ಸ್ಪೇನ್ ತಂಡವು ಇದೀಗ ಸತತ ಗೆಲುವುಗಳ ಮೂಲಕ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ವಿಶೇಷ.




