T20 World Cup 2026: ಟಿ20 ವಿಶ್ವಕಪ್ಗೆ ಡೇಟ್ ಫಿಕ್ಸ್
T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ನಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ತಂಡಗಳ ನಡುವಣ ಕದನವು ಫೆಬ್ರವರಿ ಮತ್ತು ಮಾರ್ಚ್ ನಡುವೆ ನಡೆಯಲಿದ್ದು, ಇದಕ್ಕಾಗಿ ದಿನಾಂಕವನ್ನು ನಿಗದಿ ಮಾಡಲಾಗಿದೆ. ಅಲ್ಲದೆ ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.
Updated on:Nov 10, 2025 | 8:46 AM

T20 World Cup 2026: ಬಹುನಿರೀಕ್ಷಿತ ಟಿ20 ವಿಶ್ವಕಪ್ಗೆ ದಿನಾಂಕ ನಿಗದಿಯಾಗಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದ್ದು, ಮೊದಲ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಇನ್ನು ಫೈನಲ್ ಪಂದ್ಯವು ಮಾರ್ಚ್ 8 ರಂದು ನಡೆಯಲಿದೆ. ಈ ಪಂದ್ಯ ಕೂಡ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಆಯೋಜಿಸಲಾಗುತ್ತದೆ. ಒಂದು ವೇಳೆ ಪಾಕಿಸ್ತಾನ್ ತಂಡ ಫೈನಲ್ಗೆ ತಲುಪಿದರೆ ಅಂತಿಮ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಜರುಗಲಿದೆ.

ಏಕೆಂದರೆ ಪಾಕಿಸ್ತಾನ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಟೀಮ್ ಇಂಡಿಯಾ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದ್ದರಿಂದ ಪಾಕಿಸ್ತಾನ್ ತಂಡ ಭಾರತದಲ್ಲಿ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಪಾಕ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ.

ಅದರಂತೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಶ್ರೀಲಂಕಾದಲ್ಲಿ ಮುಖಾಮುಖಿಯಾಗಲಿದೆ. ಅಲ್ಲದೆ ಪಾಕಿಸ್ತಾನ್ ತಂಡವು ಫೈನಲ್ಗೆ ತಲುಪಿದರೆ ಮಾರ್ಚ್ 8 ರಂದು ಕೊಲಂಬೊದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲಾಗುತ್ತದೆ.

ಇನ್ನು ಒಂದು ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನೊಂದು ಪಂದ್ಯಕ್ಕೆ ಸ್ಥಳ ನಿಗದಿ ಮಾಡಲಾಗಿಲ್ಲ. ಏಕೆಂದರೆ ಪಾಕಿಸ್ತಾನ್ ತಂಡ ಸೆಮಿಫೈನಲ್ಗೆ ತಲುಪಿದರೆ ಆ ಪಂದ್ಯವನ್ನು ಶ್ರೀಲಂಕಾದಲ್ಲಿ ಆಯೋಜಿಸಬೇಕಾಗುತ್ತದೆ. ಅದರಂತೆ ಫೆಬ್ರವರಿ 7 ರಿಂದ ಮಾರ್ಚ್ 8 ನಡುವೆ ಮುಂಬರುವ ಟಿ20 ವಿಶ್ವಕಪ್ ಆಯೋಜಿಸಲು ಐಸಿಸಿ ಮತ್ತು ಬಿಸಿಸಿಐ ನಿರ್ಧರಿಸಿದ್ದು, ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ತಂಡಗಳು: ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್ಎ, ಕೆನಡಾ, ನೆದರ್ಲೆಂಡ್ಸ್, ಇಟಲಿ, ನಮೀಬಿಯಾ, ಝಿಂಬಾಬ್ವೆ, ನೇಪಾಳ, ಒಮಾನ್ ಮತ್ತು ಯುಎಇ.
Published On - 7:53 am, Mon, 10 November 25




