- Kannada News Photo gallery Cricket photos T20 World Cup 2026: Tilak Varma, Washington Sundar’s recovery going as per plan
ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್
T20 World Cup 2026: ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಗಾಗಿ 15 ಸದಸ್ಯರುಗಳ ಬಲಿಷ್ಠ ಭಾರತ ತಂಡವನ್ನು ರೂಪಿಸಲಾಗಿದೆ.
Updated on: Jan 31, 2026 | 11:54 AM

T20 World Cup 2026: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಫೆಬ್ರವರಿ 7 ರಿಂದ ಶುರುವಾಗಲಿರುವ ಈ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಅದು ಸಹ ಆಟಗಾರರಿಬ್ಬರ ಫಿಟ್ನೆಸ್ ಕುರಿತಾಗಿ ಎಂಬುದು ವಿಶೇಷ.

ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದ ತಿಲಕ್ ವರ್ಮಾ ಹಾಗೂ ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಗಾಯಗೊಂಡಿದ್ದರು. ಈ ಗಾಯದ ಕಾರಣ ಇಬ್ಬರು ಆಟಗಾರರು ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಇದೀಗ ಇವರಿಬ್ಬರು ಗಾಯದಿಂದ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಜಯ ಹಝಾರೆ ಪಂದ್ಯದ ವೇಳೆ ವೃಷಣ ತಿರುಚುವಿಕೆಯಿಂದಾಗಿ ತೀವ್ರ ಹೊಟ್ಟೆ ನೋವಿಗೆ ಒಳಗಾಗಿದ್ದ ತಿಲಕ್ ವರ್ಮಾ ಕಳೆದ ವಾರ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ಗೆ ಒಳಗಾಗಿದ್ದಾರೆ. ಈ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾದ ಬೆನ್ನಲ್ಲೇ ತಿಲಕ್ ವರ್ಮಾ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಪೆಕ್ಕೆಲುಬಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ವಾಷಿಂಗ್ಟನ್ ಸುಂದರ್ ಸಹ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಇದೀಗ ಬ್ಯಾಟಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಇನ್ನು ಬೌಲಿಂಗ್ ಅಭ್ಯಾಸಗಳೊಂದಿಗೆ ಅವರು ಎನ್ಸಿಎ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ಫೆಬ್ರವರಿ 4, 2026 ರಂದು ವಾಷಿಂಗ್ಟನ್ ಸುಂದರ್ ಅವರ ಫಿಟ್ನೆಸ್ ಮೌಲ್ಯಮಾಪನ ನಡೆಯಲಿದ್ದು, ಇದಾದ ಬಳಿಕ ಅವರು ಸಹ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಅಂದರೆ ತಿಲಕ್ ವರ್ಮಾ ಹಾಗೂ ವಾಷಿಂಗ್ಟನ್ ಸುಂದರ್ ಸಂಪೂರ್ಣ ಚೇತರಿಸಿಕೊಂಡಿದ್ದು, ಇನ್ನು ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾದರೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು. ಹೀಗಾಗಿ ಸುಂದರ್ ಹಾಗೂ ತಿಲಕ್ ವರ್ಮಾ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದಾಗಿದೆ.

ಟಿ20 ವಿಶ್ವಕಪ್ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.
