- Kannada News Photo gallery Cricket photos Team India become the second team in the world to play 250+ T20I matches
ಪಾಕ್ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡ ಟೀಂ ಇಂಡಿಯಾ
Team India Achieves T20I Milestone: ಏಷ್ಯಾಕಪ್ನಲ್ಲಿ ಒಮಾನ್ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ 250ನೇ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನು ಪೂರ್ಣಗೊಳಿಸಿತು. ಈ ಮೈಲಿಗಲ್ಲು ದಾಟಿದ ಭಾರತ ಸೂಪರ್ 4 ಹಂತಕ್ಕೆ ಅಜೇಯ ತಂಡವಾಗಿ ಪ್ರವೇಶಿಸಿದೆ. ಈವರೆಗೆ 250 ಪಂದ್ಯಗಳಲ್ಲಿ 167 ಗೆಲುವು ಸಾಧಿಸಿರುವ ಭಾರತದ ಗೆಲುವಿನ ಶೇಕಡಾವಾರು 66.66 ಆಗಿದೆ. ವಿವಿಧ ನಾಯಕರ ನೇತೃತ್ವದಲ್ಲಿ ಈ ಮೈಲಿಗಲ್ಲು ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ.
Updated on: Sep 20, 2025 | 5:37 PM

ಭಾರತ ಮತ್ತು ಒಮಾನ್ ನಡುವಿನ ಪಂದ್ಯದೊಂದಿಗೆ ಏಷ್ಯಾಕಪ್ ಗುಂಪು ಹಂತ ಮುಕ್ತಾಯಗೊಂಡಿದೆ. ಇದೀಗ ಸೂಪರ್ 4 ಸುತ್ತು ಆರಂಭವಾಗಲಿದೆ. ಒಮಾನ್ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಅಜೇಯ ತಂಡವಾಗಿ ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿರುವ ಟೀಂ ಇಂಡಿಯಾ ಇನ್ನು ಇದೇ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಿತು.

ವಾಸ್ತವವಾಗಿ ಒಮಾನ್ ವಿರುದ್ಧದ ಟಿ20 ಪಂದ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ 250ನೇ ಪಂದ್ಯವಾಗಿದೆ. ಈ ಮೂಲಕ ಟೀಂ ಇಂಡಿಯಾ ಪಾಕಿಸ್ತಾನದ ನಂತರ 250 ಅಂತರರಾಷ್ಟ್ರೀಯ ಟಿ20ಪಂದ್ಯಗಳನ್ನು ಆಡಿದ ವಿಶ್ವದ ಎರಡನೇ ರಾಷ್ಟ್ರ ಎನಿಸಿಕೊಂಡಿದೆ. ಪಾಕಿಸ್ತಾನವು ಪ್ರಸ್ತುತ 275 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದೆ.

ಇಲ್ಲಿಯವರೆಗೆ ಆಡಿರುವ 250 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ಟೀಂ ಇಂಡಿಯಾ 167 ಪಂದ್ಯಗಳಲ್ಲಿ ಗೆದ್ದಿದ್ದು, 71 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ ಆರು ಪಂದ್ಯಗಳು ಟೈ ಆಗಿವೆ. ಈ 250 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಗೆಲುವಿನ ಶೇಕಡಾವಾರು 66.66 ಆಗಿದೆ.

2006 ರಲ್ಲಿ ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ಭಾರತ ತನ್ನ ಮೊದಲ ಟಿ20 ಪಂದ್ಯವನ್ನು ಆಡಿತ್ತು. ಆ ಪಂದ್ಯವನ್ನೂ ಗೆದ್ದುಕೊಂಡಿತ್ತು. ಅದಾದ ನಂತರ, ಧೋನಿ ನಾಯಕತ್ವದಲ್ಲಿ ಭಾರತ ತಂಡವು ತನ್ನ 50ನೇ ಟಿ20 ಪಂದ್ಯವನ್ನಾಡಿ ಅದನ್ನು ಗೆದ್ದಿತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ತನ್ನ 100 ನೇ ಟಿ20 ಪಂದ್ಯವನ್ನು ಆಡಿ ಅದನ್ನು ಗೆದ್ದಿತ್ತು.

ಹಾಗೆಯೇ ಕೊಹ್ಲಿ ನಾಯಕತ್ವದಲ್ಲಿಯೇ 150 ನೇ ಟಿ20 ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ಆ ಪಂದ್ಯವನ್ನು ಸಹ ಗೆದ್ದಿತು. ಆದರೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 200ನೇ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ಟೀಂ ಇಂಡಿಯಾ ಆ ಪಂದ್ಯದಲ್ಲಿ ಗೆಲುವು ಸಾಧಿಸುವುದರಲ್ಲಿ ವಿಫಲವಾಗಿತ್ತು.

ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 250 ನೇ ಟಿ20ಪಂದ್ಯವನ್ನಾಡಿದ್ದ ಭಾರತ ಅಮೋಘ ಗೆಲುವು ಸಾಧಿಸಿದೆ. ಅಲ್ಲದೆ ಈ ಪಂದ್ಯ ಸೂರ್ಯಕುಮಾರ್ ಯಾದವ್ ನಾಯಕನಾಗಿ 25 ನೇ ಟಿ20 ಪಂದ್ಯವಾಗಿತ್ತು. ಇದುವರೆಗೆ 25 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿರುವ ಸೂರ್ಯ20 ಪಂದ್ಯಗಳನ್ನು ಗೆದ್ದಿದ್ದರೆ, 4 ಪಂದ್ಯಗಳಲ್ಲಿ ಸೋತಿದೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ.




