ಭಾರತೀಯ ಬ್ಯಾಟರ್ಗಳ ಸಿಡಿಲಬ್ಬರಕ್ಕೆ ಹೊಸ ವಿಶ್ವ ದಾಖಲೆ ನಿರ್ಮಾಣ
India vs New Zealand: ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 48 ರನ್ಗಳಿಂದ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ದಾಖಲಿಸಿತು. ನಾಲ್ಕನೇ ಪಂದ್ಯವನ್ನು ನ್ಯೂಝಿಲೆಂಡ್ 50 ರನ್ಗಳಿಂದ ಗೆದ್ದುಕೊಂಡರೆ, ಕೊನೆಯ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 46 ರನ್ಗಳ ಗೆಲುವು ದಾಖಲಿಸಿದೆ.
Updated on: Feb 01, 2026 | 7:38 AM

ಟಿ20 ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ಗಳು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಸಿಡಿಲಬ್ಬರದೊಂದಿಗೆ. ಅಂದರೆ ನ್ಯೂಝಿಲೆಂಡ್ ವಿರುದ್ಧ ಐದನೇ ಟಿ20 ಪಂದ್ಯದಲ್ಲಿ 271 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದೆ.

ತಿರುವನಂತಪುರದ ಗ್ರೀನ್ಫೀಲ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಇಶಾನ್ ಕಿಶನ್ (103) ಶತಕ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ (63) ಅರ್ಧಶತಕ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 271 ರನ್ ಕಲೆಹಾಕಿತು.

ಈ 271 ರನ್ಗಳೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂರು 270 ರನ್ಗಳಿಗಿಂತ ಅಧಿಕ ಸ್ಕೋರ್ಗಳಿಸಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿತು. ಭಾರತ ತಂಡವನ್ನು ಹೊರತುಪಡಿಸಿ ವಿಶ್ವದ ಯಾವುದೇ ತಂಡ ಮೂರು ಬಾರಿ 270 ಕ್ಕಿಂತ ಅಧಿಕ ಸ್ಕೋರ್ ಗಳಿಸಿಲ್ಲ.

ಭಾರತ ತಂಡವು 2024 ರಲ್ಲಿ ಬಾಂಗ್ಲಾದೇಶ್ ವಿರುದ್ಧ 20 ಓವರ್ಗಳಲ್ಲಿ 297 ರನ್ ಬಾರಿಸಿದ್ದರು. ಹಾಗೆಯೇ ಸೌತ್ ಆಫ್ರಿಕಾ ವಿರುದ್ಧ 283 ರನ್ಗಳ ಇನಿಂಗ್ಸ್ ಆಡಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧ 271 ರನ್ ಪೇರಿಸುವ ಮೂಲಕ ಟೀಮ್ ಇಂಡಿಯಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ಬಾರಿ 270+ ಸ್ಕೋರ್ಗಳಿಸಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 272 ರನ್ಗಳ ಕಠಿಣ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಇದಾಗ್ಯೂ 19.4 ಓವರ್ಗಳಲ್ಲಿ ಕಿವೀಸ್ ಪಡೆಯನ್ನು 225 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ 46 ರನ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
