- Kannada News Photo gallery Cricket photos Tilak Varma came to my room And said give me a chance at No. 3: Suryakumar Yadav
ಸೂರ್ಯನ ಬಳಿ ಚಾನ್ಸ್ ಕೇಳಿ ಸೆಂಚುರಿ ಸಿಡಿಸಿದ ತಿಲಕ್ ವರ್ಮಾ
ಭಾರತ ಟಿ20 ತಂಡದ ಪರ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಆಡುವುದು ವಾಡಿಕೆ. ಆದರೆ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯಕ್ಕೂ ಮುನ್ನ 3ನೇ ಕ್ರಮಾಂಕದಲ್ಲಿ ನನಗೆ ಚಾನ್ಸ್ ನೀಡಿ ಎಂದು ತಿಲಕ್ ವರ್ಮಾ ಕೇಳಿಕೊಂಡಿದ್ದಾರೆ. ಅದರಂತೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಶತಕ ಬಾರಿಸಿ ಮಿಂಚಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಖುಷಿ ವ್ಯಕ್ತಪಡಿಸಿದ್ದಾರೆ.
Updated on: Nov 14, 2024 | 11:59 AM

ಸೆಂಚುರಿಯನ್ನಲ್ಲಿನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಗೆ ತಿಲಕ್ ವರ್ಮಾ ಹೆಸರು ಕೂಡ ಸೇರ್ಪಡೆಯಾಗಿದೆ. ಅಲ್ಲದೆ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ 13ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಶತಕದ ಹಿಂದಿರುವ ಸ್ವಾರಸ್ಯಕರ ಘಟನೆಯೊಂದನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದ್ದಾರೆ.

ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಕಳಪೆ ಬ್ಯಾಟಿಂಗ್ ಪ್ರಮುಖ ಕಾರಣವಾಗಿತ್ತು. ಈ ಸೋಲಿನ ಬಳಿಕ ತಿಲಕ್ ವರ್ಮಾ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ರೂಮ್ಗೆ ತೆರಳಿದ್ದರು.

ಅಲ್ಲದೆ ಮುಂದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡುವಂತೆ ಸೂರ್ಯಕುಮಾರ್ ಯಾದವ್ ಅವರಲ್ಲಿ ಕೇಳಿಕೊಂಡಿದ್ದರು. ನನಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಂದು ಅವಕಾಶ ಕೊಡಿ. ನಾನು ಚೆನ್ನಾಗಿ ಬ್ಯಾಟ್ ಮಾಡುತ್ತೇನೆ ಎಂದು ತಿಲಕ್ ವರ್ಮಾ ನಾಯಕನ ಮನವೊಲಿಸಿದರು.

ಅತ್ತ ಯುವ ಆಟಗಾರನ ಕೋರಿಕೆಗೆ ನಾಯಕ ಸೂರ್ಯಕುಮಾರ್ ಯಾದವ್ ಓಕೆ ಎಂದರು. ಅಲ್ಲದೆ ತಮ್ಮ ಕ್ರಯಾಂಕವನ್ನು ತ್ಯಾಗ ಮಾಡಿ, ತಿಲಕ್ ವರ್ಮಾ ಅವರನ್ನು ಮೂರನೇ ಟಿ20 ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದರು.

ಹೀಗೆ ಪಡೆದ ಅವಕಾಶವನ್ನು ಬಳಸಿಕೊಂಡ ಯುವ ದಾಂಡಿಗ ಅಬ್ಬರಿಸಿದರು. ಸೌತ್ ಆಫ್ರಿಕಾ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ತಿಲಕ್ ವರ್ಮಾ 56 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಈ ಮೂಲಕ ನಾಯಕನಿಗೆ ನೀಡಿದ ಮಾತನ್ನು ಉಳಿಸಿಕೊಂಡು, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
