- Kannada News Photo gallery Cricket photos Tilak Varma: Youngest Indian to 1000 T20I Runs Before 25 A Historic Milestone
IND vs SA: ಮೊದಲ ಟಿ20ಯಲ್ಲಿ ಟೆಸ್ಟ್ ಆಡಿಯೂ ವಿಶಿಷ್ಟ ಮೈಲಿಗಲ್ಲು ದಾಟಿದ ತಿಲಕ್ ವರ್ಮಾ
Tilak Varma T20I record: ಟಿ20 ಕ್ರಿಕೆಟ್‌ನಲ್ಲಿ ತಿಲಕ್ ವರ್ಮಾ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. 25 ವರ್ಷ ತುಂಬುವ ಮುನ್ನವೇ 1,000 ಅಂತರರಾಷ್ಟ್ರೀಯ T20 ರನ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅವರ ಪ್ರತಿಭೆ ಮತ್ತು ಸ್ಥಿರತೆಗೆ ಸಾಕ್ಷಿಯಾಗಿದೆ.
Updated on: Dec 09, 2025 | 9:31 PM

ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಟಿ20 ಮಾದರಿಯಲ್ಲಿ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಈ ಮಾದರಿಯಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿರುವ ತಿಲಕ್ ರನ್ಗಳ ಮಳೆಯನ್ನೇ ಹರಿಸಿದ್ದಾರೆ. ಈ ಮೂಲಕ ಅವರು ಈ ಚುಟುಕು ಮಾದರಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಟಿದ್ದು, ಈ ಹಿಂದೆ ಯಾವುದೇ ಭಾರತೀಯ ಆಟಗಾರ ಸಾಧಿಸದ ಸಾಧನೆಯನ್ನು ಅವರು ಮಾಡಿದ್ದಾರೆ.

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ರನ್ ಗಳಿಸುವ ಮೂಲಕ ತಿಲಕ್ ವರ್ಮಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,000 ರನ್‌ಗಳನ್ನು ಪೂರೈಸಿದರು. ಇದರೊಂದಿಗೆ, 25 ವರ್ಷ ದಾಟುವ ಮೊದಲು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಿಲಕ್ ವರ್ಮಾ 23 ವರ್ಷ ಮತ್ತು 31 ದಿನಗಳಲ್ಲಿ ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ತಿಲಕ್‌ಗಿಂತ ಮೊದಲು, 25 ವರ್ಷ ಮತ್ತು 65 ದಿನಗಳಲ್ಲಿ 1,000 ಟಿ20 ರನ್ ಪೂರೈಸಿದ್ದ ಅಭಿಷೇಕ್ ಶರ್ಮಾ ಹೆಸರಲ್ಲಿ ಈ ದಾಖಲೆ ಇತ್ತು. ಇದು ಮಾತ್ರವಲ್ಲದೆ ತಿಲಕ್ ವರ್ಮಾ ಟಿ20ಗಳಲ್ಲಿ 1,000 ರನ್ ಗಳಿಸಿದ 13 ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಹಾಗೆಯೇ ತಿಲಕ್ ವರ್ಮಾ 1,000 ರನ್‌ಗಳನ್ನು ವೇಗವಾಗಿ ತಲುಪಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ 28 ಇನ್ನಿಂಗ್ಸ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ತಿಲಕ್ ವಿಶೇಷ ಮೈಲಿಗಲ್ಲು ದಾಟಿದರು ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ತೀರ ನಿಧಾನಗತಿಯಲ್ಲಿತ್ತು. ತಮ್ಮ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 32 ಎಸೆತಗಳನ್ನು ಎದುರಿಸಿದ ತಿಲಕ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಕೇವಲ 26 ರನ್ ಗಳಿಸಿ ಔಟಾದರು. ಆದಾಗ್ಯೂ ಈ ಪಂದ್ಯದಲ್ಲಿ ಅವರು ಬಾರಿಸಿದ ಸಿಕ್ಸರ್ ನೇರವಾಗಿ ಮೈದಾನದಿಂದ ಹೊರಗೆ ಹೋಗಿ ಬಿದ್ದಿದ್ದು, ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿತು.




