Updated on:Nov 26, 2022 | 7:32 PM
ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂರು ವಿಕೆಟ್ಗಳೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಯಾರು ಮಾಡದ ವಿಶೇಷ ಸಾಧನೆಯನ್ನು ಕಿವೀಸ್ ವೇಗಿ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ಟಿಮ್ ಸೌಥಿ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪೂರೈಸಿದ್ದರು. ಇದರೊಂದಿಗೆ ಮೂರು ಮಾದರಿಯಲ್ಲೂ ಮೂರಂಕಿ ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಅಂದರೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಟಿಮ್ ಸೌಥಿ 347 ವಿಕೆಟ್ ಕಬಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದರು.
ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 134 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು. ಈ ಮೂಲಕ ಚುಟುಕು ಮಾದರಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಇದೀಗ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 202 ವಿಕೆಟ್ ಕಬಳಿಸಿರುವ ಟಿಮ್ ಸೌಥಿ ಮೂರು ಮಾದರಿಯಲ್ಲಿ ಮೂರಂಕಿ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಟಿಮ್ ಸೌಥಿ ಬರೆದಿರುವುದು ವಿಶೇಷ.
ಇನ್ನು ಐಪಿಎಲ್ನಲ್ಲಿ ಆರ್ಸಿಬಿ, ರಾಜಸ್ಥಾನ್ ರಾಯಲ್ಸ್, ಕೆಕೆಆರ್, ಸಿಎಸ್ಕೆ ಪರ ಒಟ್ಟು 52 ಪಂದ್ಯಗಳನ್ನಾಡಿರುವ ಟಿಮ್ ಸೌಥಿ 45 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಐಪಿಎಲ್ ಸೀಸನ್ 16 ಗಾಗಿ ಕೆಕೆಆರ್ ತಂಡವು ಸೌಥಿಯನ್ನು ತಂಡದಲ್ಲೇ ಉಳಿಸಿಕೊಂಡಿದೆ. ಹೀಗಾಗಿ ಮುಂಬರುವ ಸೀಸನ್ನಲ್ಲಿ ನ್ಯೂಜಿಲೆಂಡ್ ವೇಗಿ ಕೊಲ್ಕತ್ತಾ ಪರ ಕಣಕ್ಕಿಳಿಯಲಿದ್ದಾರೆ.
Published On - 7:31 pm, Sat, 26 November 22