ಈ ಬಾರಿಯ ಐಪಿಎಲ್ ಮಿನಿ ಹರಾಜಿನ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ದಾಖಲೆ ಮೊತ್ತಕ್ಕೆ ಖರೀದಿಸುವ ಮೂಲಕ ಎಂಬುದು ವಿಶೇಷ.
ಅಂದರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಬಿಡ್ ಆದ ಆಟಗಾರ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ. ಈ ಬಾರಿಯ ಹರಾಜಿನ ಮೂಲಕ ಸ್ಟಾರ್ಕ್ ಅವರನ್ನು ಕೆಕೆಆರ್ ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿದೆ.
ಇದರೊಂದಿಗೆ ಐಪಿಎಲ್ 2024 ರಲ್ಲಿ ಅತ್ಯಧಿಕ ವೇತನ ಪಡೆಯುವ ಆಟಗಾರರ ಪಟ್ಟಿಯಲ್ಲಿ ಸ್ಟಾರ್ಕ್ ಅಗ್ರಸ್ಥಾನಕ್ಕೇರಿದೆ. ಹಾಗೆಯೇ ಈ ಪಟ್ಟಿಯಲ್ಲಿರುವ ಉಳಿದ 9 ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ....
1- ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಬರೋಬ್ಬರಿ 24.75 ಕೋಟಿ ರೂ.ಗೆ ಖರೀದಿಸಿದೆ. ಅದರಂತೆ ಈ ಬಾರಿ ಕೆಕೆಆರ್ ಆಸೀಸ್ ವೇಗಿಗೆ 24.75 ಕೋಟಿ ರೂ. ಸಂಭಾವನೆ ನೀಡಲಿದೆ.
2- ಪ್ಯಾಟ್ ಕಮಿನ್ಸ್: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ 2ನೇ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್. ಆಸೀಸ್ ನಾಯಕನನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 20.50 ಕೋಟಿ ರೂ.ಗೆ ಖರೀದಿಸಿದೆ.
3- ಸ್ಯಾಮ್ ಕರನ್: ಐಪಿಎಲ್ 2023 ರ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು 18.5 ಕೋಟಿ ರೂ.ಗೆ ಖರೀದಿಸಿದೆ. ಅದರಂತೆ ಈ ಬಾರಿ ಕೂಡ ಸ್ಯಾಮ್ ಕರನ್ 18.5 ಕೋಟಿ ರೂ. ಪಡೆಯಲಿದ್ದಾರೆ.
4- ಕ್ಯಾಮರೋನ್ ಗ್ರೀನ್: ಐಪಿಎಲ್ ಸೀಸನ್-16 ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ 17.5 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ಬಾರಿ ಆರ್ಸಿಬಿ ಗ್ರೀನ್ ಅವರನ್ನು ಟ್ರೇಡ್ ಮಾಡಿಕೊಂಡಿದೆ. ಅದರಂತೆ ಈ ಸೀಸನ್ನಲ್ಲಿ ಆರ್ಸಿಬಿ ಗ್ರೀನ್ ಅವರಿಗೆ 17.5 ಕೋಟಿ ರೂ. ನೀಡಲಿದೆ.
5- ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 2022 ರಲ್ಲಿ ಕೆಎಲ್ ರಾಹುಲ್ ಅವರನ್ನು ಬರೋಬ್ಬರಿ 17 ಕೋಟಿ ರೂ. ನೀಡಿ ಖರೀದಿಸಿತು. ಅದರಂತೆ ಲಕ್ನೋ ತಂಡದ ನಾಯಕನಿಗೆ ಈ ಸಲ ಕೂಡ 17 ಕೋಟಿ ರೂ. ಸಿಗಲಿದೆ.
6- ರೋಹಿತ್ ಶರ್ಮಾ: ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್ ಶರ್ಮಾ ಅವರ ಪ್ರಸ್ತುತ ಸಂಭಾವನೆ 16 ಕೋಟಿ ರೂ.
7- ರವೀಂದ್ರ ಜಡೇಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸಿಎಸ್ಕೆ ಪಾವತಿಸುತ್ತಿರುವ ಸಂಭಾವನೆ ಮೊತ್ತ ಬರೋಬ್ಬರಿ 16 ಕೋಟಿ ರೂ.
8- ರಿಷಭ್ ಪಂತ್: ಕಳೆದ ಕೆಲ ಸೀಸನ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಿರುವ ರಿಷಭ್ ಪಂತ್ ಪಂತ್ 16 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.
9- ಆ್ಯಂಡ್ರೆ ರಸೆಲ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ಗೆ ಕಳೆದ 2 ಸೀಸನ್ಗಳಿಂದ ಕೆಕೆಆರ್ 16 ಕೋಟಿ ರೂ. ಪಾವತಿಸುತ್ತಿದೆ.
10- ನಿಕೋಲಸ್ ಪೂರನ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ಗೆ ಎಲ್ಎಸ್ಜಿ ಫ್ರಾಂಚೈಸಿ ಪಾವತಿಸುತ್ತಿರುವ ಮೊತ್ತ ಬರೋಬ್ಬರಿ 16 ಕೋಟಿ ರೂ.
ಇನ್ನು ಈ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳದ ವಿರಾಟ್ ಕೊಹ್ಲಿಗೆ ಆರ್ಸಿಬಿ ನೀಡುತ್ತಿರುವ ವೇತನ ಕೇವಲ 15 ಕೋಟಿ ರೂ. ಮಾತ್ರ. ಇದಾಗ್ಯೂ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಮುಂದುವರೆದಿರುವುದು ವಿಶೇಷ.
Published On - 7:39 am, Thu, 21 December 23